ಗಂಗಾವತಿ ಕಿಲ್ಲಾ ಏರಿಯಾ ನಿವಾಸಿ ಇಸಾಕ್ ಎಂಬುವರ ಮನೆ ಮುಂದೆ ಪೌರ ಕಾರ್ಮಿಕರು ಕಸ ಸುರಿದಿರುವುದು.
- ಹಲ್ಲೆ ನಡೆಸಿದ ಇಸಾಕ್ ಎಂಬುವರ ಮನೆ ಮುಂದೆ ಕಸ ಸುರಿದು ಪೌರಕಾರ್ಮಿಕರ ಆಕ್ರೋಶ
ಗಂಗಾವತಿ: ಘನತ್ಯಾಜ್ಯ ವಿಲೇವಾರಿ ವಿಚಾರಕ್ಕೆ ನಗರದ 6ನೇ ವಾರ್ಡ್‌ನ ಕಿಲ್ಲಾ ಏರಿಯಾದಲ್ಲಿ ಕರ್ತವ್ಯ ನಿರತ ನಗರಸಭೆ ಪೌರ ಕಾರ್ಮಿಕ ನಬೀಸಾಬ್ ಎಂಬುವರ ಮೇಲೆ ಇಸಾಕ್ ಎಂಬಾತ ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ವಿಲೇವಾರಿ ವಾಹನದೊಂದಿಗೆ ಕಿಲ್ಲಾ ಏರಿಯಾಕ್ಕೆ ಬಂದಿದ್ದ ನಬೀಸಾಬ್, ಹಸಿ ಮತ್ತು ಒಣ ಕಸ ವಿಂಗಡನೆ ವಿಚಾರವಾಗಿ ಇಸಾಕ್ ಎಂಬುವರಿಗೆ ಸೂಚನೆ ನೀಡಿದ್ದಾರೆ. ಇದರಿಂದ ಕುಪಿತಗೊಂಡ ಇಸಾಕ್, ಏಕಾಏಕಿ ಹಲ್ಲೆ ನಡೆಸಿದರಲ್ಲದೇ ಇನ್ನುಳಿದ ಪೌರ ಕಾರ್ಮಿಕರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಸ್ವಚ್ಛ ಭಾರತ ಮಿಷನ್ ಕಾಯ್ದೆ ಬಗ್ಗೆ ತಿಳಿಸಿದರೂ ಕೇಳದ ಇಸಾಕ್ ಅನುಚಿತವಾಗಿ ವರ್ತಿಸಿದ್ದಾರೆ. ಕೋಪಗೊಂಡ ಪೌರ ಕಾರ್ಮಿಕರು ವಾಹನದಲ್ಲಿದ್ದ ತ್ಯಾಜ್ಯವನ್ನು ಇಸಾಕ್ ಮನೆ ಮುಂದೆ ಹಾಕಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಿಢೀರ್ ಪ್ರತಿಭಟನೆ
ಹಲ್ಲೆ ಸುದ್ದಿ ತಿಳಿಯುತ್ತಿದ್ದಂತೆ ಕರ್ತವ್ಯನಿರತ ಎಲ್ಲ ಪೌರಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಹಲ್ಲೆ ನಡೆಸಿದ ವ್ಯಕ್ತಿ ವಿರುದ್ಧ ಕ್ರಮಕ್ಕಾಗಿ ಪೊಲೀಸ್ ಠಾಣೆ ಮುಂದೆ ದಿಢೀರ್ ಪ್ರತಿಭಟನೆ ನಡೆಸಿದರು. ವಿಲೇವಾರಿ ವಾಹನದೊಂದಿಗೆ ಠಾಣೆಗೆ ಮುತ್ತಿಗೆ ಹಾಕಿದರು. ಪ್ರಕರಣ ದಾಖಲಿಸುವಂತೆ ಪೌರ ಕಾರ್ಮಿಕರು ಒತ್ತಾಯಿಸಿದರಲ್ಲದೇ, ರಕ್ಷಣೆ ನೀಡುವಂತೆ ನಗರಸಭೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದರು. ಪ್ರಕರಣ ದಾಖಲಿಸಲು ಪೊಲೀಸರು ಒಪ್ಪಿದ್ದರಿಂದ ಪ್ರತಿಭಟನೆ ಹಿಂಪಡೆದರು. ತ್ಯಾಜ್ಯ ವಿಲೇವಾರಿ ವಿಚಾರದಲ್ಲಿ ನಿತ್ಯವೂ ಒಂದಲ್ಲ, ಒಂದು ಜಗಳವಾಗುತ್ತಿದ್ದು, ಕಾರ್ಮಿಕರಿಗೆ ಭದ್ರತೆಯಿಲ್ಲದಂತಾಗಿದೆ. ಹಲ್ಲೆ ನಡೆಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಪೌರ ಕಾರ್ಮಿಕ ಸಂಘಟನೆಯ ಮಾಯಮ್ಮ, ಪರಶುರಾಂ ಇತರರು ಒತ್ತಾಯಿಸಿದರು.
ಪರಿಸರ ಇಂಜಿನಿಯರ್ ಶರಣಪ್ಪ ಮಾತನಾಡಿ, ಘನತ್ಯಾಜ್ಯ ವಿಲೇವಾರಿ ವಿಚಾರದಲ್ಲಿ 2026ರ ಕಾಯ್ದೆಯಲ್ಲಿ ಸ್ಪಷ್ಟವಾಗಿದ್ದು, ಸಾರ್ವಜನಿಕರು ಪೌರ ಕಾರ್ಮಿಕರೊಂದಿಗೆ ಸಹಕಾರ ನೀಡಬೇಕು. ಸ್ಪಂದಿಸದಿದ್ದರೆ ಅಥವಾ ಅನುಚಿತವಾಗಿ ವರ್ತಿಸಿದರೆ ಕಸವನ್ನು ಮನೆ ಮುಂದೆ ಹಾಕಲು ಕಾಯ್ದೆಯಲ್ಲಿದ್ದು, ದಂಡದ ಜತೆಗೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಅವಕಾಶವಿದೆ. ಹೀಗಾಗಿ ಹಲ್ಲೆ ನಡೆಸಿದ ಇಸಾಕ್ ಎಂಬುವರ ವಿರುದ್ಧ ನಗರ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಲು ಪೊಲೀಸರು ಒಪ್ಪಿದ್ದಾರೆ ಎಂದರು.
ನಗರಸಭೆ ವ್ಯವಸ್ಥಾಪಕ ಷಣ್ಮುಖಪ್ಪ, ಆರೋಗ್ಯ ನಿರೀಕ್ಷಕರಾದ ಎ.ನಾಗರಾಜ್, ರಾಧಿಕಾ ಅಂಗಡಿ ಸೇರಿ ಪೌರ ಕಾರ್ಮಿಕ ಸಂಘಟನೆ ಪದಾಧಿಕಾರಿಗಳು ಮತ್ತು ಸಮುದಾಯ ಸಂಚಾಲಕರಿದ್ದರು. ಪ್ರಕರಣ ಹಿಂಪಡೆಯುವಂತೆ ಪ್ರಭಾವಿ ರಾಜಕಾಣಿಯೊಬ್ಬರ ಬೆಂಬಲಿಗರು ನಗರಸಭೆ ಮತ್ತು ಪೊಲೀಸರ ಮೇಲೆ ಪ್ರಭಾವ ಬೀರಿದ್ದರೂ, ಪ್ರಕರಣ ದಾಖಲಿಸಲೇ ಬೇಕೆಂದು ಪೌರ ಕಾರ್ಮಿಕ ಸಂಘಟನೆಗಳು ಒತ್ತಾಯಿಸಿದ್ದರಿಂದ ಅಧಿಕಾರಿಗಳು ಪೇಚಿಗೆ ಸಿಲುಕಿದ್ದರು.
"
ಘನತ್ಯಾಜ್ಯ ವಿಲೇವಾರಿ ವಿಚಾರದಲ್ಲಿ ಪೌರ ಕಾರ್ಮಿಕರೊಂದಿಗೆ ಸಾರ್ವಜನಿಕರು ಸಹಕರಿಸಬೇಕಿದ್ದು, ಕಾನೂನು ಕೈಗೆ ತೆಗೆದುಕೊಳ್ಳಬಾರದು. ಕರ್ತವ್ಯ ನಿರತ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಕಾಯ್ದೆಯಲ್ಲಿ ಅವಕಾಶವಿದೆ.
— ಶರಣಪ್ಪ ಪರಿಸರ ಇಂಜಿನಿಯರ್, ನಗರಸಭೆ