ತಾಲೂಕಿನ ಕೂಕನಪಳ್ಳಿ ಅಂಗನವಾಡಿ ಕೇಂದ್ರದಲ್ಲಿ ಶಾಲಾಪೂರ್ವ ಶಿಕ್ಷಣ ಪೂರ್ಣಗೊಳಿಸಿದ ಮಕ್ಕಳಿಗೆ ಬೀಳ್ಕೊಡುಗೆ ಮಾಡಲಾಯಿತು. ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸಿದ್ದಪ್ಪ ಕುರಿ, ಕಲಿಕೆ ಟಾಟಾ ಟ್ರಸ್ಟ್ ಜಿಲ್ಲಾ ವ್ಯವಸ್ಥಾಪಕ ಅಶೋಕ್, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ದೇವಮ್ಮ, ಹಿರಿಯ ಮೇಲ್ವಿಚಾರಕಿ ಉಷಾ, ಅಂಗನವಾಡಿ ಶಿಕ್ಷಕಿಯರಾದ ರೇಣುಕಾ, ಹನುಮವ್ವ, ಕವಿತಾ ಇದ್ದರು.
- ಸಿದ್ದಪ್ಪ ಕುರಿ ಅಭಿಪ್ರಾಯ
- ಶಾಲಾ ಪ್ರವೇಶೋತ್ಸವ
ಕೊಪ್ಪಳ : ಅಂಗನವಾಡಿ ಕೇಂದ್ರಗಳು ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿಯಾಗಿದ್ದು, ಶಾಲೆಗೆ ಸೇರುವ ಮುನ್ನವೇ ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಕಲಿಕೆಯ ಆಸಕ್ತಿ ಮೂಡಿಸುತ್ತಿವೆ ಎಂದು ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸಿದ್ದಪ್ಪ ಕುರಿ ಹೇಳಿದರು.
ತಾಲೂಕಿನ ಕೂಕನಪಳ್ಳಿ ಅಂಗನವಾಡಿ ಕೇಂದ್ರದಲ್ಲಿ ಶಾಲಾಪೂರ್ವ ಶಿಕ್ಷಣ ಪೂರ್ಣಗೊಳಿಸಿದ ಮಕ್ಕಳಿಗೆ ಬೀಳ್ಕೊಡುಗೆ ಹಾಗೂ ಶಾಲಾ ಪ್ರವೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲಿಕೆ ಟಾಟಾ ಟ್ರಸ್ಟ್ ಜಿಲ್ಲಾ ವ್ಯವಸ್ಥಾಪಕ ಅಶೋಕ್ ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ ಮಕ್ಕಳು ಶಾಲಾಪೂರ್ವ ಶಿಕ್ಷಣದ ಮೂಲಕ ಉತ್ತಮ ಕಲಿಕಾ ಕೌಶಲ್ಯಗಳನ್ನು ಬೆಳೆಸಿಕೊಂಡಿದ್ದು, ಚಟುವಟಿಕೆ ಆಧಾರಿತ ಶಿಕ್ಷಣವು ಮಕ್ಜಳ ಸರ್ವತೋಮುಖ ಬೆಳವಣಿಗೆಗೆ ನೆರವಾಗಿದೆ ಎಂದರು.
ಅಂಗನವಾಡಿಯಲ್ಲಿ ಮೂರು ವರ್ಷಗಳ ಶಾಲಾಪೂರ್ವ ಶಿಕ್ಷಣ ಪೂರ್ಣಗೊಳಿಸಿ ಮೊದಲನೇ ತರಗತಿಗೆ ಸೇರ್ಪಡೆಯಾಗಲಿರುವ 28 ಮಕ್ಕಳಿಗೆ ಪ್ರಮಾಣಪತ್ರ ವಿತರಿಸಿ ಶುಭ ಹಾರೈಸಲಾಯಿತು. ಈ ವೇಳೆ ಮಕ್ಕಳು ಆಕಾರಗಳು, ಬಣ್ಣಗಳು, ಅಂಕಿಗಳು, ಪ್ರಾಣಿಗಳು, ವಾಹನಗಳು, ತರಕಾರಿಗಳು, ಶಿಶುಗೀತೆಗಳು ಹಾಗೂ ವಿವಿಧ ಚಟುವಟಿಕೆಗಳನ್ನು ಪ್ರದರ್ಶಿಸಿ ತಮ್ಮ ಕಲಿಕಾ ಸಾಮರ್ಥ್ಯವನ್ನು ತೋರಿಸಿದರು.
ಬಾಲ ವಿಕಾಸ ಸಮಿತಿ ಅಧ್ಯಕ್ಷೆ ದೇವಮ್ಮ, ಹಿರಿಯ ಮೇಲ್ವಿಚಾರಕಿ ಉಷಾ, ಅಂಗನವಾಡಿ ಶಿಕ್ಷಕಿಯರಾದ ರೇಣುಕಾ, ಹನುಮವ್ವ, ಕವಿತಾ, ಸಹಾಯಕಿಯರಿದ್ದರು.