ಆನೆಗೊಂದಿ ಬಳಿ ವಾಲಿಕಿಲ್ಲಾ ಮ್ಯಾಗೋಟದ ಕೋಟೆ. 
ಕೊಪ್ಪಳ

ಆನೆಗೊಂದಿ ಉತ್ಸವಕ್ಕೆ ಅನುದಾನದ ಗ್ರಹಣ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಕೇಳಿದ್ದು ಆರು, ಸಿಕ್ಕಿದ್ದು ಮೂರು ಕೋಟಿ ರೂ
  • ಕಲಾಭಿಮಾನಿಗಳಲ್ಲಿ ನಿರಾಸೆ
ಗಂಗಾವತಿ: ವಿಜಯನಗರ ಸಾಮ್ರಾಜ್ಯದ ತೊಟ್ಟಿಲು ಖ್ಯಾತಿ ಹೊಂದಿರುವ ಐತಿಹಾಸಿಕ ಆನೆಗೊಂದಿಯ ಸಾಂಸ್ಕೃತಿಕ ವೈಭವಕ್ಕೆ ಈ ಬಾರಿ ಅನುದಾನದ ಗ್ರಹಣ ಹಿಡಿದಿದೆ. ಅದ್ದೂರಿ ಆಚರಣೆಯ ಕನಸು ಕಂಡಿದ್ದ ಜನರಿಗೆ ನಿರಾಸೆಯ ಕಾರ್ಮೋಡ ಕವಿದಿದೆ. ಸರ್ಕಾರ ಮತ್ತು ಜನಪ್ರತಿನಿಧಿಗಳ ನಡುವಿನ ಅನುದಾನ ಸಂಘರ್ಷ ಪರಿಣಾಮ ಈ ಸಾಲಿನ ಆನೆಗೊಂದಿ ಉತ್ಸವ ನಡೆಯುವುದು ಬಹುತೇಕ ಅನುಮಾನವಾಗಿದೆ.
ಹಂಪಿ ಉತ್ಸವದಷ್ಟೇ ವೈಭವದಿಂದ ಆನೆಗೊಂದಿ ಉತ್ಸವ ನಡೆಯಬೇಕೆಂಬುದು ಸ್ಥಳೀಯರ ಮೂರು ದಶಕಗಳ ಕನಸು. 1998ರಲ್ಲಿ ಅಂದಿನ ಸರ್ಕಾರ ಉತ್ಸವಕ್ಕೆ ಚಾಲನೆ ನೀಡಿದ್ದರೂ ಅದು ನಿರಂತರ ನಡೆಯಲೇ ಇಲ್ಲ. ಕಳೆದ 28 ವರ್ಷಗಳಲ್ಲಿ ನಡೆದಿದ್ದು ಕೇವಲ 11 ಉತ್ಸವಗಳು ಮಾತ್ರ. ಪ್ರತಿ ವರ್ಷವೂ ಅನುದಾನ ಬಿಡುಗಡೆ ವಿಚಾರದಲ್ಲಿ ಸರ್ಕಾರ ಅನುಸರಿಸುತ್ತಿರುವ ವಿಳಂಬ ನೀತಿ ಮತ್ತು ಸ್ಥಳೀಯ ಶಾಸಕರ ಇಚ್ಛಾಶಕ್ತಿಯ ಕೊರತೆಯೇ ಈ ಅಸ್ಥಿರತೆಗೆ ಕಾರಣವಾಗಿದೆ. ಈ ಹಿಂದೆ ಬಿಜೆಪಿ ಆಡಳಿತಾವಧಿಯಲ್ಲಿ ಉತ್ಸವಕ್ಕೆ ಸಿಕ್ಕಿದ್ದ ಮೆರುಗು ಈಗ ಮಾಯವಾಗಿರುವುದು ಕಲಾಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಸರ್ಕಾರದಿಂದ ಇಬ್ಬಗೆ ನೀತಿ

ಹಂಪಿ ಉತ್ಸವಕ್ಕೆ 25 ಕೋಟಿ ರೂ.ವರೆಗೆ ಅನುದಾನ ಹರಿಸುವ ಸರ್ಕಾರ, ವಿಜಯನಗರ ಸಾಮ್ರಾಜ್ಯದ ಮೂಲನೆಲೆಯಾದ ಆನೆಗೊಂದಿ ಉತ್ಸವಕ್ಕೆ ಮಾತ್ರ ಕನಿಷ್ಠ ಶೇ.20 ಹಣ ನೀಡಲೂ ಮೀನಮೇಷ ಎಣಿಸುತ್ತಿದೆ. ನೆರೆಯ ಕನಕಗಿರಿ ಉತ್ಸವಕ್ಕೆ ಆರು ಕೋಟಿ ರೂ. ನಿಗದಿಪಡಿಸಿರುವ ಕನ್ನಡ-ಸಂಸ್ಕೃತಿ ಇಲಾಖೆ, ಆನೆಗೊಂದಿ ಉತ್ಸವಕ್ಕೆ ಕೇವಲ ಮೂರು ಕೋಟಿ ರೂ. ಘೋಷಿಸಿರುವುದು ತಾರತಮ್ಯ ಎನ್ನುತ್ತಾರೆ ಸ್ಥಳೀಯರು. ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಆನೆಗೊಂದಿ ಭಾಗದ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಬೇಕಾದ ಉತ್ಸವಕ್ಕೆ ಸರ್ಕಾರ ನೀಡುತ್ತಿರುವ ಅನುದಾನ ಯಾವುದಕ್ಕೂ ಸಾಲದಾಗಿದೆ.

ಆಡಳಿತಾತ್ಮಕ ತೊಡಕುಗಳು

ಕಳೆದ 2024ರಲ್ಲಿ ನಡೆದ ಆನೆಗೊಂದಿ ಉತ್ಸವದ ಆರ್ಥಿಕ ಹೊರೆ ಇನ್ನೂ ಜಿಲ್ಲಾಡಳಿತದ ಬೆನ್ನ ಮೇಲಿದೆ. ಅಂದು ಐದು ಕೋಟಿ ರೂ.ವರೆಗೆ ವ್ಯಯಿಸಲಾಗಿದ್ದರೂ ಸರ್ಕಾರ ಬಿಡುಗಡೆ ಮಾಡಿದ್ದು ಕೇವಲ ಎರಡು ಕೋಟಿ ರೂ. ಮಾತ್ರ. ಕಳೆದ ಎರಡು ವರ್ಷಗಳಿಂದ ಗುತ್ತಿಗೆದಾರರು ಮತ್ತು ಶಾಸಕ ಜನಾರ್ದನರೆಡ್ಡಿ ಅವರ ಬೆಂಬಲಿಗರು ಬಾಕಿ ಬಿಲ್ ಪಾವತಿಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಅಲೆಯುತ್ತಿದ್ದರೂ ಬಿಡಿಗಾಸು ಬಿಡುಗಡೆಯಾಗಿಲ್ಲ. ಈ ಹಿಂದಿನ ಬಾಕಿ ಮತ್ತು ಪ್ರಸಕ್ತ ಸಾಲಿನ ಅದ್ದೂರಿತನವನ್ನು ಗಮನದಲ್ಲಿಟ್ಟುಕೊಂಡು ಶಾಸಕರು ಆರು ಕೋಟಿ ರೂ. ನೀಡುವಂತೆ ಪಟ್ಟು ಹಿಡಿದಿದ್ದಾರೆ.

ಸಚಿವ-ಶಾಸಕರ ನಡುವಿನ ಪ್ರತಿಷ್ಠೆ

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮತ್ತು ಶಾಸಕ ಗಾಲಿ ಜನಾರ್ದನರೆಡ್ಡಿ ನಡುವಿನ ಅನುದಾನ ಸಂಘರ್ಷ ಈಗ ಬೀದಿಗೆ ಬಂದಿದೆ. ಆರು ಕೋಟಿ ರೂ. ನೀಡಿದರೆ ಮಾತ್ರ ಉತ್ಸವ ಎಂದು ರೆಡ್ಡಿ ಖಡಕ್ ಸೂಚನೆ ನೀಡಿದ್ದಾರೆ. ಆದರೆ, ಸಚಿವರು ಮೂರು ಕೋಟಿ ರೂ.ಗೆ ಬದ್ಧರಾಗಿದ್ದಾರೆ. ಸದ್ಯ ಕನಕಗಿರಿ ಉತ್ಸವ ಸಿದ್ಧತೆಯಲ್ಲಿರುವ ಸಚಿವ ತಂಗಡಗಿ ಅವರು ರೆಡ್ಡಿ ಅವರ ಬೇಡಿಕೆಗೆ ಮಣಿಯುವ ಲಕ್ಷಣ ಕಾಣುತ್ತಿಲ್ಲ. ಮೇ 23 ಮತ್ತು 24ರಂದು ಉತ್ಸವ ಆಚರಿಸುವ ಬಗ್ಗೆ ಶಾಸಕರು ಈ ಹಿಂದೆ ಹೇಳಿಕೆ ನೀಡಿದ್ದರೂ ಸದ್ಯಕ್ಕೆ ಅವರು ಕ್ಷೇತ್ರದಲ್ಲಿ ಲಭ್ಯವಿಲ್ಲದಿರುವುದು ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದೆ.

ನಿಭಾಯಿಸುವುದು ಬಲುಕಷ್ಟ

ಉತ್ಸವ ನೆಪದಲ್ಲಿ ಆನೆಗೊಂದಿ ರಸ್ತೆಗಳ ಸುಧಾರಣೆ, ಬೃಹತ್ ವೇದಿಕೆ ನಿರ್ಮಾಣ, ಹೆಲಿಪ್ಯಾಡ್ ಅಭಿವೃದ್ಧಿಯಾಗಬೇಕಿದೆ. ಸೆಲೆಬ್ರಿಟಿಗಳು ಹಾಗೂ ಹೊರರಾಜ್ಯದ ಕಲಾವಿದರ ಸಂಭಾವನೆ ನೀಡಲು ವಿಶೇಷ ಪ್ಯಾಕೇಜ್ ಅಗತ್ಯವಿದೆ. ಸರ್ಕಾರದ ಮೂರು ಕೋಟಿ ರೂ.ಗಳಲ್ಲಿ ಇದೆಲ್ಲವನ್ನೂ ನಿಭಾಯಿಸುವುದು ಅಸಾಧ್ಯ ಎಂಬುದು ಆಯೋಜಕರ ವಾದ. ಅತ್ತ ಅನುದಾನ ಬಿಡುಗಡೆಯಾಗದೆ, ಇತ್ತ ಬಿಲ್ ಪಾವತಿಯಾಗದೆ ಆನೆಗೊಂದಿ ಉತ್ಸವದ ಭವಿಷ್ಯ ಈಗ ಅತಂತ್ರ ಸ್ಥಿತಿಯಲ್ಲಿದೆ.

ಆನೆಗೊಂದಿ ಉತ್ಸವಕ್ಕೆ ಹೆಚ್ಚುವರಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಕಡಿಮೆ ಅನುದಾನ ನೀಡುವ ಬಗ್ಗೆ ಗೊತ್ತಾಗಿದೆ. ಕನಿಷ್ಠ ಆರು ಕೋಟಿ ರೂ. ನೀಡಿದರೆ ಮಾತ್ರ ಆನೆಗೊಂದಿ ಉತ್ಸವ ಅದ್ದೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಸಾಧ್ಯ.

— ಗಾಲಿ ಜನಾರ್ದನರೆಡ್ಡಿ ಶಾಸಕ, ಗಂಗಾವತಿ

ಪ್ರತಿ ವರ್ಷ ಆನೆಗೊಂದಿ ಉತ್ಸವ ಆಚರಿಸಲು ಸರ್ಕಾರ ಪ್ರತ್ಯೇಕ ಅನುದಾನ ನಿಗದಿಪಡಿಸಬೇಕಿದೆ. ಉತ್ಸವದ ಅನುದಾನಕ್ಕಾಗಿ ಸರ್ಕಾರದ ಮುಂದೆ ಕೈ ಚಾಚುವುದು ತಪ್ಪಬೇಕಿದೆ. ಹಂಪಿ ಉತ್ಸವದಷ್ಟೇ ಪ್ರಾಮುಖ್ಯ ಆನೆಗೊಂದಿ ಉತ್ಸವಕ್ಕೂ ನೀಡಬೇಕಿದೆ.

— ಪಂಪಣ್ಣ ನಾಯಕ ಜಿಲ್ಲಾಧ್ಯಕ್ಷ, ಕರವೇ (ಪ್ರವೀಣ ಶೆಟ್ಟಿ ಬಣ)