ಕೊಪ್ಪಳ ತಾಲೂಕಿನ ಗುಳದಳ್ಳಿಯಲ್ಲಿ ಅಂಬೇಡ್ಕರ್​ ಜಯಂತಿ ಅಂಗವಾಗಿ 81 ಜೋಡಿಗಳಿಗೆ ಸಂವಿಧಾನ ಪೀಠಿಕೆ ಪಠಿಸುವ ಮೂಲಕ ಮಾಂಗಲ್ಯ ಧಾರಣೆ ಮಾಡಿಸಲಾಯಿತು. 
ಕೊಪ್ಪಳ

ನ್ಯಾಯಾಂಗಕ್ಕೆ ದಿಕ್ಕು ತೋರಿದ ಮಹಾನ್​ ಚಿಂತಕ ಅಂಬೇಡ್ಕರ್​

ಪ್ರಮುಖ ಮುಖ್ಯಾಂಶಗಳು

  • ನ್ಯಾ. ಮಹಾಂತೇಶ್​ ದರಗದ ಅಭಿಪ್ರಾಯ
  • ಸಂವಿಧಾನ ಪೀಠಿಕೆ ಪಠಿಸಿ ಮಾಂಗಲ್ಯ ಧಾರಣೆ
ಕೊಪ್ಪಳ : ಭಾರತೀಯ ನ್ಯಾಯಾಂಗಕ್ಕೆ ಒಂದು ದಿಕ್ಕು ತೋರಿದ್ದು ಡಾ. ಬಿ.ಆರ್​.ಅಂಬೇಡ್ಕರ್​ ಕೊಟ್ಟ ಸಂವಿಧಾನ. ಇಂದು ಅವರ ಜಯಂತಿ ಅಂಗಾವಗಿ ಅವರು ಬರೆದಿರುವಂತಹ ಸಂವಿಧಾನ ಪೀಠಿಕೆ ಪಠಿಸುವ ಮುಖಾಂತರ 81 ನವ ಜೋಡಿಗಳಿಗೆ ಮಾಂಗಲ್ಯ ಧಾರಣೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹಿರಿಯ ಸಿವಿಲ್​ ನ್ಯಾಯಾಧೀಶರು ಹಾಗು ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್​. ದರಗದ ಹೇಳಿದರು.
ತಾಲೂಕಿನ ಗುಳದಳ್ಳಿಯಲ್ಲಿ ಗುರುವಾರ ಡಾ. ಬಿ.ಆರ್​.ಅಂಬೇಡ್ಕರ್​ ಜಯಂತಿ ಅಂಗವಾಗಿ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವೆಲ್ಲರೂ ತಂದೆ ತಾಯಿಗಳ ಆಶೀರ್ವಾದದಿಂದ ಇವತ್ತು ನೂತನವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದೇವೆ ಆದರೆ ಹೆಂಡತಿ ಬಂದ ಮೇಲೆ ಹೆತ್ತವರನ್ನು ಗೌರವದಿಂದ ನೋಡಿಕೊಳ್ಳುವುದು ಮತ್ತು ಅವರನ್ನು ಪ್ರೀತಿಸುವುದು ಕಡಿಮೆಯಾಗುತ್ತದೆ. ಆಗಬಾರದು ಹೆತ್ತವರೆ ಮೊದಲ ದೇವರು ಅವರನ್ನು ಸದಾ ನಾವು ಜೋಪಾನ ಮಾಡಬೇಕು ಮತ್ತು ಬಾಬಾ ಸಾಹೇಬರ ಸಂವಿಧಾನಿನ ಕಾನೂನನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು. ಉತ್ತಮ ಶಿಕ್ಷಣ ಪಡೆದಾಗ ಮಾತ್ರ ಸಮಾಜದಲ್ಲಿ ಸ್ವಚ್ಛ ಬದುಕನ್ನು ಕಟ್ಟಿಕೊಳ್ಳಲಿಕ್ಕೆ ಸಾಧ್ಯವಾಗುತ್ತದೆ ಎಂದರು.
ಚಿತ್ರದುರ್ಗ ಮಠದ ಶ್ರೀ ಷಡಕ್ಷರ ಮುನಿ ಸ್ವಾಮೀಜಿ ಮಾತನಾಡಿ, ನಾವೆಲ್ಲರೂ ಎಲ್ಲರೊಂದಿಗೆ ಒಡಗೂಡಿ ಬೆಳೆಯಬೇಕು. ಮನುಷ್ಯ ಒಬ್ಬನೇ ಇದ್ದು, ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಸಮಾಜದಲ್ಲಿ ಬದುಕುವ ನಾವು ಪರಸ್ಪರ ಸಹಕಾರ, ಪ್ರೀತಿ, ಗೌರವ ಮತ್ತು ಏಕತೆ ಇವುಗಳನ್ನು ಬೆಳೆಸಿಕೊಂಡಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯ. ಒಬ್ಬರಿಂದ ಸಾಧ್ಯವಿಲ್ಲದ ಕೆಲಸ, ಎಲ್ಲರು ಸೇರಿ ಮಾಡಿದರೆ ಸುಲಭ. ನಮ್ಮ ದೇಶದ ವಿವಿಧತೆಯಲ್ಲಿ ಏಕತೆ ಹೊಂದಿರುವ ಏಕೈಕ ದೇಶ. ಇಲ್ಲಿ ವಾಸಿಸು ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಬದುಕುತ್ತೇವೆ. ಇದು ನಮ್ಮ ಬಲ. ನಾವು ಒಬ್ಬರನ್ನೊಬ್ಬರು ಗೌರವಿಸಿದರೆ, ಸಹಾಯ ಮಾಡಿದರೆ, ಪರಸ್ಪರ ಬೆಂಬಲ ನೀಡಿದರೆ, ಸಮಾಜದಲ್ಲಿ ಶಾಂತಿ ಮತ್ತು ಸವೃದ್ಧಿ ಹೆಚ್ಚುತ್ತದೆ ಎಂದರು.
ಹಂಪಿಯ ಶ್ರೀ ಪೂರ್ಣಾನಂದ ಭಾರತಿ ಸ್ವಾಮಿ, ಇಟಗಿ ಅಳವಂಡಿ ಮಠದ ಶ್ರೀ ಗದಿಯಾಪ್ಪಜ್ಜ ಸ್ವಾಮಿಗಳು ಸಾನಿದ್ಯ ವಹಿಸಿದ್ದರು.
ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ಜೆಡಿಎಸ್​ ರಾಜ್ಯ ಕೋರ್​ ಕಮಿಟಿ ಸದಸ್ಯ ಸಿವಿ ಚಂದ್ರಶೇಖರ್​, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್​, ಸಾಮೂಹಿಕ ವಿವಾಹಗಳ ಆಯೋಜನ ಸಂಸ್ಥೆಯ ಗೌರವ ಅಧ್ಯಕ್ಷ, ಗೂಳಪ್ಪ ಹಲಗೇರಿ, ಸಮಾಜದ ಹಿರಿಯ ವಕೀಲ ಎಮ್​ ಪೂಜಾರ್​, ಉಮೇಶ್​ ಕಾರಜೋಳ, ವೆಂಕಟೇಶ್​ ಬಾರಕೇರ, ಗುಡದಪ್ಪ ದೊಡ್ಮನಿ, ಯಮನೂರಪ್ಪ ಕುಕುನೂರ್​, ಅಮರಪ್ಪ ಯಡ್ಡೋಣಿ ಸಂಜೀವಪ್ಪ ಮೇಟಿ ನಿಂಗಪ್ಪ ಗಿರೀಶ್​ ಹಿರೇಮಠ ಇತರರಿದ್ದರು.