ಕೊಪ್ಪಳ: ನಗರದ ಶ್ರೀ ಮಳೆ ಮಲ್ಲೇಶ್ವರ ದೇವಸ್ಥಾನದ ಬಯಲು ರಂಗಮಂದಿರದಲ್ಲಿ ಮೇ 7 ರಿಂದ 10 ರವರೆಗೆ ನಾಲ್ಕು ದಿನಗಳ ಕಾಲ ಕೊಪ್ಪಳ ಜಿಲ್ಲಾ ಸಾಂಸತಿಕ ಪ್ರವಾಸೋದ್ಯಮ ಸಪ್ತಾಹ ಹಾಗೂ 12ನೇ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸತಿಕ ಸಮ್ಮೇಳನ ಆಯೋಜಿಸಲಾಗಿದೆ ಎಂದು ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷ ರಮೇಶ ಸುರ್ವೆ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಹಿರಿಯ ಸಾಹಿತಿ ಮಲ್ಲಿಕಾರ್ಜುನ ಹಿರೇಮಠ ಅವರ ಸರ್ವಾಧ್ಯಕ್ಷತೆಯಲ್ಲಿ ಈ ಸಮ್ಮೇಳನ ನಡೆಯಲಿದೆ. ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ರಾಘವೇಂದ್ರ ಹಿಟ್ನಾಳ್ ಸ್ವಾಗತ ಸಮಿತಿ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರತಿದಿನ ಸಂಜೆ ಪ್ರವಾಸೋದ್ಯಮ ಮತ್ತು ಜಿಲ್ಲೆಯ ಸಾಂಸತಿಕ ಪರಂಪರೆ ಕುರಿತು 16 ಸಾಹಿತಿಗಳಿಂದ ವಿಷಯ ಮಂಡನೆ ನಡೆಯಲಿದೆ. 100ಕ್ಕೂ ಹೆಚ್ಚು ನೃತ್ಯ ಕಲಾವಿದರು, 50ಕ್ಕೂ ಹೆಚ್ಚು ಗಾಯಕರು ಹಾಗೂ ಜ್ಯೂ. ಶಂಕರನಾಗ್ ಮತ್ತು ಜ್ಯೂ. ರವಿಚಂದ್ರನ್ ಅವರಿಂದ ಮನರಂಜನಾ ಕಾರ್ಯಕ್ರಮಗಳಿರಲಿವೆ.
ದಶಕದ ಶ್ರೇಷ್ಠ ಕಾದಂಬರಿ ಹಾಗೂ 15 ವರ್ಷದೊಳಗಿನ ಮಕ್ಕಳ ಸಾಹಿತ್ಯ ಕೃತಿಗಳ ಸ್ಪರ್ಧೆ ಏರ್ಪಡಿಸಲಾಗಿದೆ. 600 ಪುಟಗಳ ಪ್ರವಾಸಿ ಸಾಹಿತ್ಯ ಕೈಪಿಡಿ ಬಿಡುಗಡೆ, ವ್ಯಂಗ್ಯಚಿತ್ರ ಹಾಗೂ ಕರಕುಶಲ ಪ್ರದರ್ಶನ ಜರುಗಲಿವೆ. ಜಿಲ್ಲೆಯ ಏಳು ತಾಲೂಕುಗಳ ಪ್ರವಾಸಿ ತಾಣಗಳ ಬಗ್ಗೆ ಲೇಖನ ಹಾಗೂ ಕವನಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತರು ಸಂಸ್ಥೆಯ ವಿಳಾಸಕ್ಕೆ ಕಳುಹಿಸಬಹುದು. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಪ್ರತಿದಿನ ಅನ್ನಪ್ರಸಾದದ ವ್ಯವಸ್ಥೆ ಇರಲಿದೆ ಎಂದು ಮಾಹಿತಿ ನೀಡಿದರು.
ಉಮೇಶ ಸುರ್ವೆ, ಮಂಜುನಾಥ ಗೊಂಡಬಾಳ ಇದ್ದರು