ವಯಸ್ಸಿನ ಪ್ರಮಾಣಪತ್ರ ನೀಡುವುದಕ್ಕಾಗಿ ತಾತ್ಕಾಲಿಕವಾಗಿ ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಂಬಂಧಿಸಿದ ವೈದ್ಯರನ್ನು ನೇಮಿಸಲು ಆಗ್ರಹಿಸಿ ಸಾರ್ವಜನಿಕರು ಶುಕ್ರವಾರ ಆಡಳಿತ ವೈದ್ಯಾಧಿಕಾರಿ ಡಾ. ಶರಣಪ್ಪ ಚಕೋಟಿಗೆ ಮನವಿ ಸಲ್ಲಿಸಿದರು. ಹನುಮೇಶ ಗಂಗಾಮತ, ಮಲ್ಲೇಶ, ಭೀಮರೆಡ್ಡಿ ಗುಂಜಳ್ಳಿ, ಲಕ್ಷ್ಮೀದೇವಿ ಇತರರಿದ್ದರು.
- ಜಿಲ್ಲಾಡಳಿತಕ್ಕೆ ಹಿರಿಯ ನಾಗರಿಕರ ಮನವಿ
ಕನಕಗಿರಿ: ಹಿರಿಯ ನಾಗರಿಕರ ಪ್ರಮಾಣ ಪತ್ರ ನೀಡುವುದಕ್ಕಾಗಿ ಸ್ಥಳೀಯ ಆಸ್ಪತ್ರೆಗೆ ವೈದ್ಯರನ್ನು ನೇಮಿಸಲು ಆಗ್ರಹಿಸಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶರಣಬಸಪ್ಪ ಚಕೋಟಿಗೆ ಶುಕ್ರವಾರ ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರು ಮನವಿ ಸಲ್ಲಿಸಿದರು.
ಹಿಂದೂ ಜಾಗರಣಾ ವೇದಿಕೆ ಸಂಚಾಲಕ ಅಯ್ಯನಗೌಡ ಅಳ್ಳಳ್ಳಿ ಮಾತನಾಡಿ, ಹಿರಿಯ ನಾಗರಿಕರಿಗೆ ಸರ್ಕಾರದಿಂದ ಪ್ರತಿ ತಿಂಗಳು ದೊರೆಯುತ್ತಿದ್ದ ಮಾಸಾಶನಕ್ಕಾಗಿ ಇದೀಗ ವಯಸ್ಸಿನ ಪ್ರಮಾಣ ಪತ್ರ ಅವಶ್ಯವಾಗಿದೆ. ಕನಕಗಿರಿ ತಾಲೂಕಿನ 64 ಗ್ರಾಮಗಳಲ್ಲಿ ನೂರಾರು ಹಿರಿಯ ನಾಗರಿಕರಿದ್ದು, ಸಂಬಂಧಿಸಿದ ವೈದ್ಯರಿಲ್ಲದ ಕಾರಣ, ವೃದ್ಧರು ಪ್ರಮಾಣ ಪತ್ರಕ್ಕಾಗಿ ಕೊಪ್ಪಳಕ್ಕೆ ಅಲೆಯಬೇಕಾಗಿರುವುದು ಕಷ್ಟಕರ ಕೆಲಸವಾಗಿದೆ. ಹೀಗಾಗಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿಯೇ ಪ್ರಮಾಣ ಪತ್ರ ನೀಡಲು ಒಂದು ವಾರಗಳ ಕಾಲ ಸಂಬಂಧಿಸಿದ ವೈದ್ಯರನ್ನು ನೇಮಿಸಿ ವೃದ್ಧರಿಗೆ ಅನುಕೂಲ ಮಾಡಿಕೊಡಲು ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರಮುಖರಾದ ಮಂಜುನಾಥ ಸಜ್ಜನ್, ಯಮನೂರಪ್ಪ ಸೂಡಿ, ಹನುಮೇಶ ಗಂಗಾಮತ, ಮಲ್ಲೇಶ, ಭೀಮರೆಡ್ಡಿ ಗುಂಜಳ್ಳಿ, ಲಕ್ಷ್ಮೀದೇವಿ ಇತರರಿದ್ದರು.