ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್‌ಗೆ ಕರ್ನಾಟಕ ರೈತ ಸಂಘದ ತಾಲೂಕು ಸಮಿತಿಯಿಂದ ಮನವಿ ಸಲ್ಲಿಸಲಾಯಿತು. ತಾಲೂಕು ಅಧ್ಯಕ್ಷ ದೇವಪ್ಪ ಕಂಬಳಿ, ಕಾರ್ಯದರ್ಶಿ ಶರಣಪ್ಪ ಸಿದ್ದಾಪೂರ, ಜಿಲ್ಲಾ ಕಾರ್ಯಾಧ್ಯಕ್ಷ ಮಲ್ಲೇಶಗೌಡ ಕನ್ನೆರಡು, ತಾಲೂಕು ಅಧ್ಯಕ್ಷ ನಿರುಪಾದಿ ಬುನ್ನಟ್ಟಿ , ಸದಸ್ಯರಾದ ಶ್ಯಾಮೀದಸಾಬ್ ತಾವರಗೇರಾ, ದ್ಯಾಮಮ್ಮ, ರಗಡಪ್ಪ ಮೆಣೇದಾಳ ಇತರರಿದ್ದರು.
- ಶಾಸಕ ದೊಡ್ಡನಗೌಡ ಪಾಟೀಲ್‌ಗೆ ಮನವಿ
- ಕರ್ನಾಟಕ ರೈತ ಸಂಘದ ತಾಲೂಕು ಸಮಿತಿ ಆಗ್ರಹ
ಕುಷ್ಟಗಿ: ತಾಲೂಕಿನ ಮ್ಯಾದರಡೊಕ್ಕಿ ತಾಂಡಾದ ದಲಿತರಿಗೆ ಸೂಕ್ತ ರಕ್ಷಣೆ ಕೊಡುವುದು ಹಾಗೂ ಸರ್ಕಾರಿ ಅರಣ್ಯ ಭೂಮಿಯಲ್ಲಿ ಸಾಗುವಳಿಗೆ ಅನುಕೂಲ ಕಲ್ಪಿಸಬೇಕೆಂದು ಕರ್ನಾಟಕ ರೈತ ಸಂಘದ ತಾಲೂಕು ಸಮಿತಿಯಿಂದ ಶಾಸಕ ದೊಡ್ಡನಗೌಡ ಪಾಟೀಲ್‌ಗೆ ಬುಧವಾರ ಮನವಿ ಸಲ್ಲಿಸಲಾಯಿತು.
ತಾಲೂಕು ಅಧ್ಯಕ್ಷ ದೇವಪ್ಪ ಕಂಬಳಿ ಮಾತನಾಡಿ, ತಾಲೂಕಿನ ಮ್ಯಾದರಡೊಕ್ಕಿ ತಾಂಡದ ದಲಿತ ಕುಟುಂಬಗಳು ಹಾಗೂ ಬಡ ರೈತರು ಸಂ.ನಂ 74ರ ಭೂಮಿಯನ್ನು ಕಳೆದ 50-60 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು 20ಕ್ಕೂ ಹೆಚ್ಚು ಸಿಬ್ಬಂದಿ 2026 ಫೆ.18ರಂದು ಸಾಗುವಳಿದಾರರ ಮೇಲೆ ದೌರ್ಜನ್ಯ ನಡೆಸಿ ಗುಂಡಿ ತೋಡಿದ್ದಾರೆ. ಸಾಗುವಳಿದಾರರಾದ ನಿರುಪಾದಿ ರಾಠೋಡ್, ಟಾಕಪ್ಪ ರಾಠೋಡ್ ಗುಂಡಿ ಮುಚ್ಚುವ ಜೆಸಿಬಿ ನಿಲ್ಲಿಸಲು ಅರಣ್ಯ ಅಧಿಕಾರಿಗಳಿಗೆ ವಿನಂತಿಸಿದರೂ ಅರಣ್ಯ ಇಲಾಖೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ದೌರ್ಜನ್ಯ ನಡೆಸಿದ್ದಾರೆ.
ಸರ್ಕಾರದ ಆದೇಶದಂತೆ 3ಎಕರೆಗಿಂತ ಕಡಿಮೆ ಅರಣ್ಯ ಭೂಮಿಯನ್ನು ಸಾಗುವಳಿ ಮಾಡುವವರನ್ನು ಒಕ್ಕಲೆಬ್ಬಿಸಬಾರದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅನೇಕ ಸಂದರ್ಭಗಳಲ್ಲಿ ಸ್ಪಷ್ಟಪಡಿಸಿದ್ದಾರೆ. 1980ಕ್ಕಿಂತ ಮುಂಚೆಯೇ ಸಾಗುವಳಿ ಮಾಡುವ ರೈತರನ್ನು ಭೂಮಿಯಿಂದ ತೆರವುಗೊಳಿಸಬಾರದು. ಸಾಗುವಳಿ ಮಾಡುವ ಭೂಮಿಗೆ ಅರಣ್ಯ ಕಾಯ್ದೆ ಅನ್ವಯವಾಗುವುದಿಲ್ಲ. ಇದಲ್ಲದೇ ಮ್ಯಾದರಡೊಕ್ಕಿ ಗ್ರಾಮ ಸೇರಿದಂತೆ ತಾಲೂಕಿನಲ್ಲಿ ಸಾವಿರಾರು ಎಕರೆ ಅರಣ್ಯ ಭೂಮಿ ಖಾಲಿ ಇದೆ. ಈ ಭೂಮಿಯಲ್ಲಿ ಒಂದು ಗಿಡಗಳು ಕೂಡ ಇಲ್ಲ. ಇಂತಹ ಭೂಮಿಯಲ್ಲಿ ಗಿಡ ಹಾಕುತ್ತಿಲ್ಲ. ದಲಿತರು, ಬಡ ರೈತರು ಸಾಗುವಳಿ ಮಾಡುತ್ತಿರುವ ಭೂಮಿಯಲ್ಲಿ ಗಿಡ ಹಾಕುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಮನವಿ ಸ್ವೀಕರಿಸಿದ ಶಾಸಕ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.