ಕೊಪ್ಪಳ: ಬಹುದಿನದಿಂದ ತಲೆಮರೆಸಿಕೊಂಡಿದ್ದ ನಗರಾಭಿವೃದ್ಧಿ ಪ್ರಾಧಿಕಾರ ಅಕ್ರಮ ಹಗರಣ ಪ್ರಕರಣದ ಪ್ರಮುಖ ಆರೋಪಿ ರವೀಂದ್ರ ಕುಮಾರ್ ಹಾಗೂ ಆತನ ಪತ್ನಿ ರಮಾ ಕೊನೆಗೂ ಪೊಲೀಸರ ಅತಿಥಿಗಳಾಗಿದ್ದಾರೆ.
ಪ್ರಾಧಿಕಾರದಿಂದ ರಚಿಸುವ ನಿವೇಶನ ಪಡೆಯಲು ಸಾರ್ವಜನಿಕರು ಕಟ್ಟಿದ್ದ ಹಣ ದುರುಪಯೋಗ ಆಗಿದೆ. ನಕಲಿ ಖಾತೆ ಸೃಷ್ಟಿಸಿ 8.43 ಕೋಟಿ ರೂ. ಲಪಟಾಯಿಸಿದ್ದು, ಬಹುದೊಡ್ಡ ಹಗರಣ ನಡೆದಿದೆ. ಮಹಿಳೆಯೊಬ್ಬರು ನೀಡಿದ ದೂರಿನ ನಂತರ ಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಾಗುತ್ತಲೇ ಆರೋಪಿ ರವೀಂದ್ರ ಕುಮಾರ್ ತಲೆಮರೆಸಿಕೊಂಡಿದ್ದು 20 ದಿನವಾದರೂ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಆರೋಪಿ ಹಾಗೂ ಆತನ ಕುಟುಂಬಸ್ಥರ ಖಾತೆಗೆ ಅಪಾರ ಹಣ ವರ್ಗಾವಣೆ ಆಗಿದ್ದು ಪತ್ತೆಯಾಗಿದೆ. ಹೀಗಾಗಿ ಕುಟುಂಬದವರೆಲ್ಲ ತಪ್ಪಿಸಿಕೊಂಡಿದ್ದರು.
ಮೂರು ದಿನಗಳ ಹಿಂದೆ ರವೀಂದ್ರ ಕುಮಾರ್ ಸಹೋದರ ಅನಿಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಇದೀಗ ರವೀಂದ್ರ ಕುಮಾರ್ ಹಾಗೂ ಆತನ ಪತ್ನಿ ರಮಾ ಅವರನ್ನು ಬಂಧಿಸಿದ್ದು ತನಿಖೆ ವೇಗ ಪಡೆಯಲಿದೆ. ಈಗಾಗಲೇ ಹಣ ವರ್ಗಾವಣೆ, ಖಾತೆಗಳ ವಿವರ ಕಲೆ ಹಾಕಿರುವ ತನಿಖಾಧಿಕಾರಿಗಳು 4 ಕೋಟಿ ರೂ. ಫ್ರೀಜ್ ಮಾಡಿದ್ದಾರೆ. ಬಾಕಿ ಹಣ ಹಾಗೂ ಹಗರಣದಲ್ಲಿ ಯಾರಾರು ಭಾಗಿಯಾಗಿದ್ದಾರೆಂಬುದು ಮುಂದಿನ ತನಿಖೆಯಿಂದ ಬಯಲಿಗೆ ಬರಬೇಕಿದೆ.