ಕೊಪ್ಪಳದ ಬಾಲಕರ ಪಿಯು ಕಾಲೇಜಿಗೆ ಮೂಲಸೌಕರ್ಯ ಕಲ್ಪಿಸುವಂತೆ ಎಬಿವಿಪಿ ಜಿಲ್ಲಾ ಸಮಿತಿ ಆಗ್ರಹಿಸಿ ಉಪ ತಹಸೀಲ್ದಾರ ಗವಿಸಿದ್ದಪ್ಪ ಮಣ್ಣೂರಗೆ ಮನವಿ ಸಲ್ಲಿಸಲಾಯಿತು. ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಸುಮಂಗಲಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ, ಜಿಲ್ಲಾ ಸಂಚಾಲಕ ಹಮ್ಮಿಗೇಶ ಎಸ್.ಪಿ., ನಗರ ಕಾರ್ಯದರ್ಶಿ ಆದಿತ್ಯ ಹವಳೆ, ತಾಲೂಕು ಸಂಚಾಲಕ ಮನೋಹರ್ ಇದ್ದರು.
ಕೊಪ್ಪಳ : ನಗರದ ಬಾಲಕರ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕದಿಂದ ಮಂಗಳವಾರ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ ಗವಿಸಿದ್ದಪ್ಪ ಮಣ್ಣೂರಗೆ ಮನವಿ ಸಲ್ಲಿಸಲಾಯಿತು.
ಕಾಲೇಜಿನಲ್ಲಿ ಸುಮಾರು ಶೇ.80ರಷ್ಟು ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳಿಂದ ಆಗಮಿಸಿ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾದ ಮೂಲಸೌಕರ್ಯಗಳಿಲ್ಲ. ಕಾಲೇಜು ಆವರಣದಲ್ಲಿನ ಹಳೆಯ ಕಟ್ಟಡವನ್ನು ಅಗತ್ಯವಿದ್ದಲ್ಲಿ ತೆರವುಗೊಳಿಸಿ, ಸುಸಜ್ಜಿತ ಕ್ರೀಡಾ ಮೈದಾನ ನಿರ್ಮಿಸಬೇಕು. ಕ್ರೀಡಾ ಅಧ್ಯಾಪಕರನ್ನು ನೇಮಕ ಮಾಡಬೇಕು. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ, ಅದರ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿಗಳ ಸುರಕ್ಷತೆಗಾಗಿ ಕಾಲೇಜಿನ ಮುಖ್ಯ ಗೇಟ್ಗೆ ಭದ್ರತಾ ಸಿಬ್ಬಂದಿ ನೇಮಕ, ಕಾಂಪೌಂಡ್ ಗೋಡೆ ಎತ್ತರಿಸಬೇಕು. ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಅನುಕೂಲವಾಗುವಂತೆ ಎನ್ಸಿಸಿ ಘಟಕ ಆರಂಭಿಸಬೇಕು. ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ವಿದ್ಯಾರ್ಥಿಗಳ ಹಿತಾಸಕ್ತಿಗಾಗಿ ಶಾಂತಿಯುತ ಹಾಗೂ ಕಾನೂನುಬದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಸುಮಂಗಲಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ, ಜಿಲ್ಲಾ ಸಂಚಾಲಕ ಹಮ್ಮಿಗೇಶ ಎಸ್.ಪಿ., ನಗರ ಕಾರ್ಯದರ್ಶಿ ಆದಿತ್ಯ ಹವಳೆ, ತಾಲೂಕು ಸಂಚಾಲಕ ಮನೋಹರ್, ವಿದ್ಯಾರ್ಥಿಗಳಾದ ಗುರುಬಸವ ಗಡಿಹಳ್ಳಿ, ಆನಂದ್, ಮಂಜುನಾಥ್, ಕೌಶಿಕ್, ಶರತಕುಮಾರ, ಅರುಣ್ ಕುಮಾರ್ ಇತರರಿದ್ದರು.