ಕನಕಗಿರಿ ಪಟ್ಟಣದಲ್ಲಿ ಕೊಲೆಯಾದ ಮಹಿಳೆಯ ಕಾರಟಗಿ ಮನೆಗೆ ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಗ್ಯಾನನಗೌಡ, ಮ್ಯಾನೇಜರ್ ರಮೇಶ ಭೇಟಿ ಪರಿಶೀಲಿಸಿದರು. ವಾಲ್ಮೀಕಿ ಸಮಾಜದ ಪ್ರಮುಖರಾದ ಕೆ.ಎನ್. ಪಾಟೀಲ್, ಶಿವರೆಡ್ಡಿ, ಬೂದಿಗಿರಿಯಪ್ಪ ಇತರರಿದ್ದರು.
- ಪರಿಹಾರ ಮೊತ್ತ ಪಾವತಿ ಹಿನ್ನೆಲೆ ಪರಿಶೀಲನೆ
ಕನಕಗಿರಿ: ಪಟ್ಟಣದ ನಿರ್ಮಾಣ ಹಂತದ ಕಟ್ಟಡದಲ್ಲಿ ಕೊಲೆಯಾದ ಮಹಿಳೆಯು ನಾಯಕ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಅವರ ಕುಟುಂಬಕ್ಕೆ ದೊರೆಯಬೇಕಾದ ಪರಿಹಾರ ಹಾಗೂ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಗುರುವಾರ ಪಪಂ ಅಧಿಕಾರಿಗಳು ಸ್ಥಳೀಯ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಕೊಲೆಯಾದ ಮಹಿಳೆ ವಾಸವಾಗಿದ್ದ ಕಾರಟಗಿ ಮನೆಗೆ ಭೇಟಿ ವರದಿ ಪಡೆದ ಅಧಿಕಾರಿ ಗ್ಯಾನನಗೌಡ, ನಂತರ ಇಲ್ಲಿನ ಠಾಣೆಗೆ ಆಗಮಿಸಿ ಎಫ್‌ಐಆರ್ ಪ್ರತಿ ಇತರ ಮಾಹಿತಿ ಪಡೆದುಕೊಂಡರು.
ಮಹಿಳೆ ಕುಟುಂಬಕ್ಕೆ ಇಲಾಖೆ ನಿಯಮಾವಳಿ ಅನ್ವಯ 8.25 ಲಕ್ಷ ರೂ. ಪರಿಹಾರ ಜತೆಗೆ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ದೊರೆಯಲಿದೆ. ನೀಡಬೇಕಿರುವ ಪರಿಹಾರ ಮೊತ್ತದಲ್ಲಿ ಮೊದಲ ಕಂತಿನಲ್ಲಿ 4.12 ಲಕ್ಷ ರೂ. ಹಾಗೂ ಚಾರ್ಜ್‌ಸೀಟ್ ಬಳಿಕ ಬಾಕಿ ಮೊತ್ತವನ್ನು ಕುಟುಂಬ ಸದಸ್ಯರ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಪರಿಹಾರ ಮೊತ್ತ ಶೀಘ್ರ ಒದಗಿಸಲು ಕೆಲ ದಾಖಲೆಗಳನ್ನು ಕುಟುಂಬಸ್ಥರು ನೀಡಬೇಕಿದೆ. ಅಲ್ಲದೇ, ಪರಿಹಾರ ಜಮೆಗೆ ಕೆಲ ತಾಂತ್ರಿಕ ತೊಂದರೆಯಿದೆ. ಸತ್ತ ಮಹಿಳೆಗೆ ಪತಿಯೂ ಇಲ್ಲವಾಗಿದೆ. ಇಬ್ಬರೂ ಹೆಣ್ಣು ಮಕ್ಕಳಿಗೆ ಮದುವೆಯಾಗಿದ್ದು, ಅಪ್ರಾಪ್ತನಾಗಿರುವ ಮಗ ವಯಸ್ಕನಾಗುವವರೆಗೂ ಬಳಕೆಗೆ ಬಾರದಂತೆ ಜಂಟಿಯಾಗಿಡುವ ಯೋಚನೆಯಿದೆ ಎಂದು ಅಧಿಕಾರಿ ಗ್ಯಾನನಗೌಡ ತಿಳಿಸಿದರು.