ಕಾರಟಗಿ ತಾಲೂಕಿನ ರವಿ ನಗರದಲ್ಲಿ ಸಂತ ಸೇವಾಲಾಲರ ಸಂದೇಶ ಹಾಗೂ ತತ್ವಗಳ ಚಿಂತನ-ಮಂಥನ ವಿಚಾರ ಸಂಕಿರಣಕ್ಕೆ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷ ಪಿ.ಲಕ್ಷ್ಮಣ ನಾಯ್ಕ ಚಾಲನೆ ನೀಡಿದರು. ದೀಪಾ ರಾಠೋಡ್, ಕುಮಾರ್ ರಾಠೋಡ್ ಇದ್ದರು. 
ಕೊಪ್ಪಳ

ಜ್ಞಾನದ ಬೆಳಕು ನೀಡಿ ದೈವತ್ವಕ್ಕೇರಿದ ಸಂತ

ಕಾರಟಗಿ: ಶೋಷಣೆ ಹಾಗೂ ಕಂದಾಚಾರಗಳಿಂದ ಜನಸಾಮಾನ್ಯರನ್ನು ಹೊರತರುವ ಮೂಲಕ ಸಂತ ಸೇವಾಲಾಲರು ಸಮಾಜಕ್ಕೆ ಜ್ಞಾನದ ಬೆಳಕನ್ನು ನೀಡಿ ದೈವತ್ವಕ್ಕೇರಿದ್ದಾರೆ ಎಂದು ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷ ಪಿ.ಲಕ್ಷ್ಮಣ ನಾಯ್ಕ ಹೇಳಿದರು.
ತಾಲೂಕಿನ ರವಿ ನಗರದ ಬಂಜಾರ ಸಮುದಾಯ ಭವನದಲ್ಲಿ ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಬೆಂಗಳೂರು ಆಶ್ರಯದಲ್ಲಿ ಸಂತ ಶ್ರೀ ಸೇವಾಲಾಲರ ಸಂದೇಶ ಹಾಗೂ ತತ್ವಗಳ ಚಿಂತನ-ಮಂಥನ ವಿಚಾರ ಸಂಕಿರಣದಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರ ತತ್ವಗಳು ನಾಡಿನ ಮನೆ ಮನಗಳಲ್ಲಿ ಎನ್ನುವ ಕಾರ್ಯಕ್ರಮಕ್ಕೆ ಭಾನುವಾರ ಸಂಜೆ ಚಾಲನೆ ನೀಡಿ ಮಾತನಾಡಿದರು.
ಸಂತ ಸೇವಾಲಾಲರು ಅಂದಿನ ಕಾಲಘಟ್ಟದಲ್ಲಿ ನೀಡಿದ ಸಂದೇಶಗಳು ಹಾಗೂ ಸಮಾಜ ಸುಧಾರಣೆಗೆ ಮಾಡಿದ ಪ್ರಯತ್ನಗಳಿಂದಾಗಿ ಅವರೊಬ್ಬ ಮಹಾನ್ ವ್ಯಕ್ತಿಯಾಗಿದ್ದಾರೆ. ಅಜ್ಞಾನ, ಮೂಢನಂಬಿಕೆ, ದುಶ್ಚಟಗಳು, ಕಂದಾಚಾರಗಳಿಂದ ನಾನಾ ರೀತಿಯ ಸಮಸ್ಯೆಗಳಿಗೆ ಸಿಲುಕಿದ್ದ ಸಮಾಜವನ್ನು ಸರಿದಾರಿಗೆ ತಂದಿದ್ದಾರೆ. ಸಮಾನತೆ, ಸೌಹಾರ್ದತೆ ಮತ್ತು ಸತ್ಯನಿಷ್ಠ ಸಂದೇಶವನ್ನು ನೀಡಿದ ಮಹಾನ್ ಸಂತರಾಗಿದ್ದಾರೆ. ಅವರ ತತ್ವಾದರ್ಶಗಳು ಇಂದಿನ ಯುವಜನತೆಗೆ ದಾರಿದೀಪವಾಗಿದ್ದು, ಅವುಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ನಂತರ ಎಐಬಿಎಸ್‌ಎಸ್ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಹಾಗೂ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ದೀಪಾ ರಾಠೋಡ್ ಮಾತನಾಡಿ, ಬಂಜಾರ ಸಮುದಾಯದ ಸಂಸ್ಕೃತಿ, ಸಾಹಿತ್ಯ ಹಾಗೂ ನಾನಾ ವಲಯಗಳಲ್ಲಿ ಸಮುದಾಯ ಸಾಧಿಸಿದ ಸಾಧನೆಯನ್ನು ಜನಸಾಮಾನ್ಯರಿಗೆ ಪರಿಚಯಿಸಲಾಗುತ್ತಿದೆ ಎಂದರು.
ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಸದಸ್ಯ ಸಂಚಾಲಕರಾದ ಕುಮಾರ್ ರಾಠೋಡ್, ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಥಾವರೆಪ್ಪ ಕೆ., ಪ್ರಮುಖರಾದ ಅಮರೇಶ ಚವ್ಹಾಣ್, ಸಂಜೀವ್ ರಾಥೋಡ್, ಸುರೇಶ್ ಚವ್ಹಾಣ್ ಇತರರಿದ್ದರು.