ಯಲಬುರ್ಗಾದಲ್ಲಿ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರವನ್ನು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಉದ್ಘಾಟಿಸಿದರು. ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ರಾಜ್ಯ ಭೋವಿ ನಿಗಮದ ರಾಜ್ಯಾಧ್ಯಕ್ಷ ಎಸ್.ರಾಮಪ್ಪ ಭೋವಿ, ಪ್ರಮುಖರಾದ ಕರಿಬಸಪ್ಪ ನಿಡಗುಂದಿ, ಶರಣಪ್ಪ ಗಾಂಜಿ, ರೇವಣಪ್ಪ ವಜ್ರಬಂಡಿ, ವೀರನಗೌಡ ಪಾಟೀಲ್, ಡಾ.ಶಿವನಗೌಡ ದಾನರೆಡ್ಡಿ ಇತರರಿದ್ದರು. 
ಕೊಪ್ಪಳ

ಸಮಾಜ ಸುಧಾರಣೆಗಾಗಿ ವಚನಕ್ರಾಂತಿ

ಪ್ರಮುಖ ಮುಖ್ಯಾಂಶಗಳು

  • ಸಮಾಜ ಸುಧಾರಣೆ

ಸಮಾಜ ಸುಧಾರಣೆಗಾಗಿ ವಚನಕ್ರಾಂತಿ

ಯಲಬುರ್ಗಾ: ಸಿದ್ದರಾಮೇಶ್ವರ ಅವರು ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿ ಅಂತರ್ಜಾತಿ ವಿವಾಹಕ್ಕೆ ಒತ್ತು ನೀಡಿದ್ದರು. 70 ಸಾವಿರಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ ಎಂದು ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ಪಟ್ಟಣದ ಬಯಲು ರಂಗಮಂದಿರದಲ್ಲಿ ತಾಲೂಕು ಭೋವಿ ಸಮಾಜ ಸಿದ್ದರಾಮೇಶ್ವರ ಕ್ಷೇಮಭಿವೃದ್ಧಿ ಸಂಘ ಹಾಗೂ ತಾಲೂಕು ಆಡಳಿತದಿಂದ ಗುರುವಾರ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಿದ್ದರಾಮೇಶ್ವರ ಅವರು ಸಮಾಜ ಸುಧಾರಣೆಗೆ ವಚನ ಕ್ರಾಂತಿಯನ್ನು ಆರಂಭಿಸಿದರು. ಹರೆಯದಲ್ಲೇ ಸಮಾಜಮುಖಿ ಕಾರ್ಯದಲ್ಲಿ ತೊಡಗಿದರು. ಸೊಲ್ಲಾಪುರದಲ್ಲಿ ಕೆರೆಗಳನ್ನು ಕಟ್ಟಿಸಿ, ಛತ್ರಗಳನ್ನು ನಿರ್ಮಿಸಿ, ಅನ್ನದಾನ ನಡೆಸಿ ಜನರಲ್ಲಿ ಕಂದಾಚಾರ ಹಾಗೂ ಮೂಢ್ಯತೆ ನಿವಾರಿಸುವ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದರು. ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದರು.

ತಹಸೀಲ್ದಾರ್ ಪ್ರಕಾಶ್ ನಾಶಿ ಮಾತನಾಡಿ, ಸಮಾಜದ ಎಲ್ಲ ವರ್ಗದವರು ಸಿದ್ದರಾಮೇಶ್ವರ ಕುರಿತು ತಿಳಿಯಬೇಕು. 12ನೇ ಶತಮಾನದ ನೊಳಂಬ ರಾಜರು ಸಿದ್ದರಾಮೇಶ್ವರರನ್ನು ಗುರುವಾಗಿ ಸ್ವೀಕರಿಸಿ, ಅವರ ಆದರ್ಶಗಳನ್ನು ಅನುಸರಿಸಿದ್ದರು. ಅವರ ತತ್ವಾದರ್ಶಗಳು ಯುವ ಪೀಳಿಗೆಗೆ ಮಾದರಿ ಎಂದು ತಿಳಿಸಿದರು.
ಬಾಗಲಕೋಟೆ-ಚಿತ್ರದುರ್ಗದ ಸಿದ್ದರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ರಾಜ್ಯ ಭೋವಿ ನಿಗಮದ ರಾಜ್ಯಾಧ್ಯಕ್ಷ ಎಸ್.ರಾಮಪ್ಪ ಭೋವಿ, ಪ್ರಮುಖರಾದ ಕರಿಬಸಪ್ಪ ನಿಡಗುಂದಿ, ಶರಣಪ್ಪ ಗಾಂಜಿ, ರೇವಣಪ್ಪ ವಜ್ರಬಂಡಿ, ವೀರನಗೌಡ ಪಾಟೀಲ್, ಡಾ.ಶಿವನಗೌಡ ದಾನರೆಡ್ಡಿ, ಆನಂದಗೌಡ ಉಳ್ಳಾಗಡ್ಡಿ, ನಾಗಪ್ಪ ವಡ್ಡರ, ಹುಲುಗಪ್ಪ ಬಂಡಿವಡ್ಡರ, ಶಿವಾನಂದ ಬಣಕಾರ, ಹನುಮಂತಪ್ಪ ವಡ್ಡರ, ರಾಮಣ್ಣ ಬಡ್ಡಿವಂಡರ ಇತರರಿದ್ದರು.