ಕುಕನೂರು ತಾಲೂಕಿನ ಬೆದವಟ್ಟಿ ಗ್ರಾಮದ ಹಿರೇಮಠದಲ್ಲಿ ಲಿಂ.ಶ್ರೀಶಿವಸಂಗಮೇಶ್ವರ ಸ್ವಾಮೀಜಿ ಪ್ರಥಮ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಚಳಗೇರಿಯ ಶ್ರೀ ವೀರಸಂಗಮೇಶ್ವರ ಸ್ವಾಮೀಜಿ ಮಾತನಾಡಿದರು. ಯಲಬುರ್ಗಾದ ಶ್ರೀಸಿದ್ದಾರಾಮೇಶ್ವರ ಸ್ವಾಮೀಜಿ, ಅನ್ನದಾನೀಶ್ವರ ಶಾಖಾಮಠದ ಡಾ.ಮಹಾದೇವ ಸ್ವಾಮೀಜಿ ಇತರರಿದ್ದರು. 
ಕೊಪ್ಪಳ

ಜೀವನಕ್ಕೆ ದಾರಿ ತೋರುವವರೇ ‘ಗುರು’

ಪ್ರಮುಖ ಮುಖ್ಯಾಂಶಗಳು

  • ಶ್ರೀ ವೀರಸಂಗಮೇಶ್ವರ ಸ್ವಾಮೀಜಿ ಅನಿಸಿಕೆ
  • ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ
ಕುಕನೂರು: ಶ್ರೀ ಶಿವಸಂಗಮೇಶ್ವರ ಸ್ವಾಮೀಜಿ ಮಠ ಕಟ್ಟಿ ಬೆಳೆಸಿದ ತಪಸ್ವಿ. ಇಂಥ ಗುರುಗಳ ಸೇವೆ ಅವಿಸ್ಮರಣೀಯ ಎಂದು ಚಳಗೇರಿಯ ಶ್ರೀ ವೀರಸಂಗಮೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಬೆದವಟ್ಟಿ ಗ್ರಾಮದ ಹಿರೇಮಠದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಲಿಂ.ಶ್ರೀ ಶಿವಸಂಗಮೇಶ್ವರ ಸ್ವಾಮೀಜಿ ಪ್ರಥಮ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀಗಳು ಪೀಠಕ್ಕೆ ಬಂದಾಗ ಮಠ ಸಾಮಾನ್ಯ ಸ್ಥಿತಿಯಲ್ಲಿತ್ತು. ತಮ್ಮ ದೂರದೃಷ್ಟಿ ಮತ್ತು ಪರಿಶ್ರಮದಿಂದ ಭಕ್ತರ ಸಹಕಾರದೊಂದಿಗೆ ಹಿರೇಮಠವನ್ನು ಭವ್ಯವಾಗಿ ನಿರ್ಮಿಸಿದರು. ಮಠದ ಭಕ್ತರ ಕಷ್ಟ-ಸುಖ ಆಲಿಸಿ, ಆಧ್ಯಾತ್ಮಿಕ ಹಾಗೂ ವ್ಯವಹಾರಿಕ ಪರಿಹಾರ ನೀಡುತ್ತಿದ್ದರು. ಗುರು ಎಂದರೆ ಮಂತ್ರ ಕೊಡುವವರಲ್ಲ, ಜೀವನದ ದಾರಿ ತೋರುವವರು ಎಂದರು.
ಯಲಬುರ್ಗಾದ ಶ್ರೀ ಸಿದ್ದಾರಾಮೇಶ್ವರ ಸ್ವಾಮೀಜಿ ಮಾತನಾಡಿ, ಶ್ರೀಗಳ ಆದರ್ಶಗಳು ನಮಗೆ ದಾರಿದೀಪ. ಸಮಾಜಕ್ಕೆ ಸಮರ್ಪಣೆ, ಸಮಾಜವೇ ಸರ್ವಸ್ವಂ, ಸತ್ಯಕ್ಕೆ ಮಿಡಿಯಲಿ ನಮ್ಮೆಲ್ಲರ ಹೃದಯ ಎಂಬ ಧ್ಯೇಯವಾಕ್ಯದೊಂದಿಗೆ ಶ್ರೀಗಳು ಜೀವನವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟಿದ್ದರು ಎಂದು ತಿಳಿಸಿದರು. ಬೆಳಗ್ಗೆ ಶ್ರೀಗಳ ಗದ್ದುಗೆಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ, ಭಾವಚಿತ್ರ ಮೆರವಣಿಗೆ ಮಾಡಲಾಯಿತು.