ಕೊಪ್ಪಳ ಅಶೋಕ ವೃತ್ತದ ಸಿಗ್ನಲ್‌ನಲ್ಲಿ ವಾಹನ ಸವಾರರ ನೆರಳಿಗಾಗಿ ಅಳವಡಿಸಿದ್ದ ಹಸಿರು ಹೊದಿಕೆ ಕಿತ್ತುಹೋಗಿ ಗಾಳಿಗೆ ತೂರಾಡುತ್ತಿರುವುದು. 
ಕೊಪ್ಪಳ

ಸಿಗ್ನಲ್ ಬಳಿ ಕಿತ್ತು ನೇತಾಡುತ್ತಿರುವ ಹಸಿರು ಹೊದಿಕೆ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಅನಾಹುತಕ್ಕೂ ಮುನ್ನ ಮುನ್ನ ತೆರವುಗೊಳಿಸಲು ವಾಹನ ಸವಾರರ ಆಗ್ರಹ
ಕೊಪ್ಪಳ: ನಗರದ ಬಸವೇಶ್ವರ ಹಾಗೂ ಅಶೋಕ ವೃತ್ತಗಳ ಸಿಗ್ನಲ್ ಬಳಿ ಬೇಸಿಗೆ ತಾಪದಿಂದ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ನೆರಳು ಒದಗಿಸುವ ಉದ್ದೇಶದಿಂದ ನಗರಸಭೆಯಿಂದ ಅಳವಡಿಸಲಾಗಿದ್ದ ಹಸಿರು ಹೊದಿಕೆಗಳು ಕಿತ್ತುಹೋಗಿ ಗಾಳಿಗೆ ತೂರಾಡುತ್ತಿದ್ದು, ಅಪಾಯದ ಆತಂಕ ಸೃಷ್ಟಿಸಿವೆ.
ಮಳೆಗಾಲ ಆರಂಭವಾಗಿದ್ದು, ಜೋರು ಗಾಗಿ ಮತ್ತು ಮಳೆಯ ಪರಿಣಾಮ ಎರಡೂ ವೃತ್ತದಲ್ಲಿನ ಹೊದಿಕೆಗಳು ಒಂದು ಭಾಗ ಕಿತ್ತು ರಸ್ತೆ ಮೇಲ್ಭಾಗದಲ್ಲಿ ನೇತಾಡುತ್ತಿವೆ. ಇದರಿಂದ ದ್ವಿಚಕ್ರ ವಾಹನ ಸವಾರರು, ಆಟೋ ಚಾಲಕರು ಹಾಗೂ ಇತರ ವಾಹನ ಚಾಲಕರಿಗೆ ತೊಂದರೆಯಾಗಿದ್ದು ಯಾವ ಕ್ಷಣದಲ್ಲಾದರೂ ಮುರಿದು ಬೀಳುವ ಸಾಧ್ಯತೆ ಇದ್ದು, ಅನಾಹುತ ಸಂಭವಿಸುವ ಮುನ್ನ ನಗರಾಡಳಿತ ಎಚ್ಚೆತ್ತುಕೊಳ್ಳಬೇಕಿದೆ.
ನಗರದ ಪ್ರಮುಖ ರಸ್ತೆಯಾಗಿರುವುದರಿಂದ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ವಿಶೇಷವಾಗಿ ಸಂಜೆ ವೇಳೆ ವಾಹನ ದಟ್ಟಭಣೆ ಹೆಚ್ಚಿರುವ ಕಾರಣ ಹಸಿರು ಹೊದಿಕೆ ಕಿತ್ತು ಬಿದ್ದರೆ ಇನ್ನಷ್ಟು ಅಪಾಯಕಾರಿಯಾಗಿ ಪರಿಣಮಿಸಲಿದೆೆ. ಅಲ್ಲದೆ, ಗಾಳಿ ಹೆಚ್ಚಾದರೆ ಹೊದಿಕೆ ಸಂಪೂರ್ಣ ರಸ್ತೆಗೆ ಬೀಳುವ ಸಾಧ್ಯತೆ ಇದ್ದು ಸ್ಥಳೀಯ ಆಡಳಿತ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ಬಸವೇಶ್ವರ ವೃತ್ತದಲ್ಲಿನ ಹಸಿರು ಹೊದಿಕೆ ಮಾತ್ರ ಕಿತ್ತಿರುವುದು ತಿಳಿದಿದೆ. ಅಶೋಕ ವೃತ್ತದಲ್ಲಿಯೂ ಕಿತ್ತಿರುವುದು ನನ್ನ ಗಮನಕ್ಕಿಲ್ಲ. ತಕ್ಷಣ ಎರಡೂ ವೃತ್ತಗಳಲ್ಲಿ ನೇತಾಡುವ ಹಸಿರು ಹೊದಿಕೆಗಳನ್ನು ತೆರವುಗೊಳಿಸಲು ಸೂಚಿಸುತ್ತೇನೆ.

— ಮಂಜುನಾಥ ಗುಂಡೂರ ನಗರಸಭೆ ಪೌರಾಯುಕ್ತ ಕೊಪ್ಪಳ

ಸಿಗ್ನಲ್ ಬಳಿ ನೆರಳಿಗಾಗಿ ಹಾಕಿರುವ ಹಸಿರು ಹೊದಿಕೆಗಳು ಕಿತ್ತು ಗಾಳಿಗೆ ತೂರಾಡುತ್ತಿದ್ದು, ಇವು ವಾಹನ ಸವಾರರ ಗಮನ ಸೆಳೆದು ಅಪಾಯ ಆಹ್ವಾನಿಸುತ್ತಿವೆ. ಬೈಕ್ ಇತರ ಲಘು ವಾಹನಗಳ ಸವಾರರಿಗೆ ತಾಗುವಷ್ಟು ಹೊದಿಕೆಗಳು ಇಳಿಕೆಯಾಗಿದ್ದು ತಕ್ಷಣ ತೆರವುಗೊಳಿಸಲು ನಗರಾಡಳಿತ ಮುಂದಾಗಬೇಕಿದೆ.

— ಪ್ರವೀಣ ಹೊಟ್ಟಿ ಕಾನೂನು ವಿದ್ಯಾರ್ಥಿ, ಕೊಪ್ಪಳ ಕುವೇಂಪು ನಗರ ನಿವಾಸಿ