ಕೊಪ್ಪಳದಲ್ಲಿ ನಡೆದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ&-2026ರ ಪ್ರಗತಿ ಪರಿಶೀಲನೆ ಕುರಿತಂತೆ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಮಾತನಾಡಿದರು. ಚುನಾವಣಾ ಶಾಖೆ ತಹಶೀಲ್ದಾರ ರವಿ ವಸ್ತ್ರದ್​, ಜಿಲ್ಲೆಯ ಮಾನ್ಯತೆ ಪಡೆದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಕೃಷ್ಣ ಇಟ್ಟಂಗಿ, ರಾಜು ಬಾಕಳೆ, ಕೆ.ಎಸ್​.ಮಲಾರಪ್ಪ, ಸುನೀಲ್​ ಹೆಸರೂರ, ಮಹಾಬಾಬಲಪ್ಪ ಇದ್ದರು. 
ಕೊಪ್ಪಳ

ಜಿಲ್ಲೆಯಲ್ಲಿ ಶೇ.96.71ರಷ್ಟು ಗಣತಿ ನಮೂನೆ ವಿತರಣೆ

ಪ್ರಮುಖ ಮುಖ್ಯಾಂಶಗಳು

  • ಡಿಸಿ ಡಾ. ಸುರೇಶ ಇಟ್ನಾಳ ಮಾಹಿತಿ
  • ಮತದಾರರ ಪಟ್ಟಿ ಪರಿಷ್ಕರಣೆಗೆ ವೇಗ
ಕೊಪ್ಪಳ : ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 11,90,214 ಮತದಾರರಿದ್ದು, ಇದುವರೆಗೆ 11,51,088 ಮತದಾರರಿಗೆ ಗಣತಿ ನಮೂನೆ ವಿತರಿಸಲಾಗಿದ್ದು, ಶೇ.96.71ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ತಿಳಿಸಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ&-2026ರ ಪ್ರಗತಿ ಪರಿಶೀಲನೆ ಹಾಗೂ ರಾಜಕೀಯ ಪಕ್ಷಗಳ ಸಹಕಾರ ಕುರಿತಂತೆ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.
ಜುಲೈ 8ರ ಸಂಜೆ 4 ಗಂಟೆಯವರೆಗೆ ನಡೆದ ಪರಿಶೀಲನೆಯಲ್ಲಿ 46 ಗೈರು, 1,182 ಖಾಯಂ ಸ್ಥಳಾಂತರ, 1,421 ಮೃತರು, 759 ಡುಪ್ಲಿಕೇಟ್​ ಹಾಗೂ 9 ಇತರೆ ಪ್ರಕರಣಗಳು ಸೇರಿ ಒಟ್ಟು 3,417 ಯುಇಎಫ್​ ಪ್ರಕರಣಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದರು. ಅಲ್ಲದೆ, ಮತದಾರರು ಸಲ್ಲಿಸಿರುವ 2,78,346 ಗಣತಿ ನಮೂನೆಗಳನ್ನು ಈಗಾಗಲೇ ಡಿಜಿಟಲೀಕರಣ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಬಿಎಲ್​ಓಗಳಿಗೆ ತಲಾ 12 ಸಾವಿರ ರೂ. ಗೌರವಧನ ವಿತರಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
ವಿಧಾನಸಭಾ ಕ್ಷೇತ್ರಗಳ ಪೈಕಿ ಕನಕಗಿರಿ ಕ್ಷೇತ್ರದಲ್ಲಿ ಶೇ.99.52ರಷ್ಟು ಗಣತಿ ನಮೂನೆ ವಿತರಣೆ ಮೂಲಕ ಮೊದಲ ಸ್ಥಾನದಲ್ಲಿದ್ದು, ಕುಷ್ಟಗಿ (ಶೇ.98.55), ಯಲಬುರ್ಗಾ (ಶೇ.98.43), ಗಂಗಾವತಿ (ಶೇ.94.64) ಹಾಗೂ ಕೊಪ್ಪಳ (ಶೇ.94.35) ಕ್ಷೇತ್ರಗಳು ನಂತರದ ಸ್ಥಾನದಲ್ಲಿವೆ. ಮತದಾರರ ಪಟ್ಟಿಯಿಂದ ಅರ್ಹರು ಹೊರಗುಳಿಯದಂತೆ ಹಾಗೂ ನಕಲಿ ಹೆಸರುಗಳು ಸೇರ್ಪಡೆಯಾಗದಂತೆ ತಡೆಯಲು ರಾಜಕೀಯ ಪಕ್ಷಗಳ ಸಹಕಾರ ಅಗತ್ಯವಾಗಿದೆ. ಬಿಎಲ್​ಓಗಳ ಮನೆ-ಮನೆ ಭೇಟಿ ಕಾರ್ಯಕ್ಕೆ ನೆರವಾಗುವಂತೆ ಬೂತ್​ ಮಟ್ಟದ ಏಜೆಂಟರ (ಬಿಎಲ್​ಎ) ನೇಮಕಾತಿ ಶೀಘ್ರ ಪೂರ್ಣಗೊಳಿಸುವಂತೆ ಮನವಿ ಮಾಡಿದರು.
ಜಿಲ್ಲಾ ಚುನಾವಣಾ ಶಾಖೆ ತಹಶೀಲ್ದಾರ ರವಿ ವಸ್ತ್ರದ್​, ಜಿಲ್ಲೆಯ ಮಾನ್ಯತೆ ಪಡೆದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಕೃಷ್ಣ ಇಟ್ಟಂಗಿ, ರಾಜು ಬಾಕಳೆ, ಕೆ.ಎಸ್​.ಮಲಾರಪ್ಪ, ಸುನೀಲ್​ ಹೆಸರೂರ, ಮಹಾಬಾಬಲಪ್ಪ ಇತರರಿದ್ದರು.