ಕೊಪ್ಪಳದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕನ್ನಡ ಜಾಗೃತಿ ಸಮಿತಿ ಸಭೆಯಲ್ಲಿ ಎಡಿಸಿ ಸಿದ್ರಾಮೇಶ್ವರ ಮಾತನಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ವಿರುಪಣ್ಣ ನವಲಿ, ಜಿಲ್ಲಾ ಜಾಗೃತಿ ಸಮಿತಿ ಸದಸದ್ಯರಾದ ಜಿ.ಎಸ್ ಗೋನಾಳ, ಡಾ. ನಾಗರಾಜ ದಂಡೋತಿ, ಮಹೇಶ ಬಳ್ಳಾರಿ, ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್, ಡಾ. ನಿಂಗಪ್ಪ ಕಂಬಳಿ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಇದ್ದರು.
- ಎಡಿಸಿ ಸಿದ್ರಾಮೇಶ್ವರ ಸೂಚನೆ
- ಜಿಲ್ಲಾ ಮಟ್ಟದ ಕನ್ನಡ ಜಾಗೃತಿ ಸಮಿತಿ ಸಭೆ
ಕೊಪ್ಪಳ : ಭಾಷಾ ಅಧಿನಿಯಮದಂತೆ ಜಿಲ್ಲೆಯಲ್ಲಿ ಕನ್ನಡ ಅಭಿವೃದ್ಧಿ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿದ್ದು. ಜಿಲ್ಲೆಯ ಎಲ್ಲಾ ಅಂಗಡಿ ಮುಂಗಟ್ಟು, ಸಂಸ್ಥೆಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯ. ತಪ್ಪಿದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಎಚ್ಚರಿಕೆ ನೀಡಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕನ್ನಡ ಜಾಗೃತಿ ಸಮಿತಿ ಸಭೆಯಲ್ಲಿ ಮಾತನಾಡಿದರು.
ಕನ್ನಡ ಅಭಿವೃದ್ದಿ ಪ್ರಾಧಿಕಾರವು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022 ಹಾಗೂ ತಿದ್ದುಪಡಿ ಅಧಿನಿಯಮ 2024 ದಡಿ ಕಾರ್ಯನಿರ್ವಹಿಸುತ್ತಿದೆ. ಕನ್ನಡ ಅನುಷ್ಠಾನ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಜಿಲ್ಲೆಯ ಎಲ್ಲಾ ಗ್ರಾಮ, ನಗರ ಪ್ರದೇಶಗಳಲ್ಲಿನ ಎಲ್ಲಾ ಸರ್ಕಾರಿ ಇಲಾಖೆ, ಸರ್ಕಾರಿ ಅಥವಾ ಸ್ಥಳಿಯ ಪ್ರಾಧಿಕಾರಗಳಿಂದ ಅನುಮತಿ ಮತ್ತು ಮಂಜೂರಾತಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ, ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್ಗಳು, ಹೋಟೆಲ್ ಹಾಗೂ ಬ್ಯಾಂಕುಗಳು ಅಳವಡಿಸಿದ ನಾಮಫಲಕಗಳಲ್ಲಿ, ಜಾಹೀರಾತು, ರಸೀದಿ, ಸೂಚನಾ ಪತ್ರಗಳಲ್ಲಿ ಕಡ್ಡಾಯವಾಗಿ ಒಂದು ತಿಂಗಳೊಳಗಾಗಿ ಕನ್ನಡ ಭಾಷೆಯನ್ನು ಶೇ.60 ರಷ್ಟು ಪ್ರದರ್ಶಿಸಬೇಕು. ತಪ್ಪಿದಲ್ಲಿ ಅಧಿನಿಯಮದ ಅನುಸಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022, ತಿದ್ದುಪಡಿ ಅಧಿನಿಯಮ 2024ನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಸಮಿತಿ ರಚಿಸಿ ಆಯಾ ತಾಲೂಕಿನಾದ್ಯಂತ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಕ್ರಮವಹಿಸಬೇಕು. ಉದ್ಯೋಗದಲ್ಲಿ ಜಿಲ್ಲೆಯ ವಾಣಿಜ್ಯ ಕೈಗಾರಿಕೆಗಳು, ಹೊಟೇಲ್ಗಳು, ಉದ್ಯಮ ಸಂಸ್ಥೆಗಳು, ಕಡ್ಡಾಯವಾಗಿ ಸ್ಥಳಿಯರಿಗೆ ಆದ್ಯತೆ ನೀಡಬೇಕು. ವಿಫಲವಾದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ವಿರುಪಣ್ಣ ನವಲಿ, ಜಿಲ್ಲಾ ಜಾಗೃತಿ ಸಮಿತಿ ಸದಸದ್ಯರಾದ ಜಿ.ಎಸ್ ಗೋನಾಳ, ಡಾ. ನಾಗರಾಜ ದಂಡೋತಿ, ಮಹೇಶ ಬಳ್ಳಾರಿ, ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್, ಡಾ. ನಿಂಗಪ್ಪ ಕಂಬಳಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಎಚ್. ಜಗದೀಶ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಇತರರಿದ್ದರು.