ಕೊಪ್ಪಳ ಮಾವು ಮಾರಾಟ ಮತ್ತು ಪ್ರದರ್ಶನ ಮೇಳದ ನೋಟ. 
ಕೊಪ್ಪಳ

10ನೇ ವರ್ಷದ ಮಾವು ಮೇಳ ಯಶಸ್ವಿ

ಪ್ರಮುಖ ಮುಖ್ಯಾಂಶಗಳು

  • 16ದಿನಕ್ಕೆ 3.30 ಕೋಟಿ ರೂ. ವಹಿವಾಟು
ಕೊಪ್ಪಳ : ತೋಟಗಾರಿಕೆ ಇಲಾಖೆಯಿಂದ ಆಯೋಜಿಸಿದ್ದ 10ನೇ ವರ್ಷದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳವು ದಾಖಲೆ ಮಟ್ಟದ ಯಶಸ್ಸು ಕಂಡಿದ್ದು, 16 ದಿನಗಳ ಅವಧಿಯಲ್ಲಿ 3.30 ಕೋಟಿಗೂ ಅಧಿಕ ವಹಿವಾಟು ನಡೆದಿದೆ. ಮೇ 12ರಿಂದ 27ರವರೆಗೆ ತೋಟಗಾರಿಕೆ ಜಂಟಿ ನಿರ್ದೇಶಕರ ಕಚೇರಿ ಆವರಣದಲ್ಲಿ ನಡೆದ ಮೇಳದಲ್ಲಿ 350 ಟನ್​ಗಿಂತ ಹೆಚ್ಚಿನ ವಿವಿಧ ತಳಿಯ ಮಾವುಗಳು ಮಾರಾಟವಾಗಿವೆ.
ಜಿಲ್ಲೆಯ ಏಳು ತಾಲೂಕುಗಳ ರೈತರು ಸೇರಿದಂತೆ ವಿವಿಧ ಜಿಲ್ಲೆಗಳ 150ಕ್ಕೂ ಹೆಚ್ಚು ರೈತರು ಹಾಗೂ ರೈತ ಉತ್ಪಾದಕ ಸಂಘಗಳು ಭಾಗವಹಿಸಿ 30ಕ್ಕೂ ಹೆಚ್ಚು ಉಚಿತ ಮಳಿಗೆಗಳ ಮೂಲಕ ಮಾವು ಮಾರಾಟ ಮಾಡಿದರು. ಕೇಸರ್​, ದಶಹರಿ, ರಸಪುರಿ, ಬೆನೆಶಾನ್​, ಸ್ವರ್ಣರೇಖಾ, ಇಮಾಮ್​ ಪಸಂದ್​, ಮಲ್ಲಿಕಾ, ತೋತಾಪುರಿ ಸೇರಿದಂತೆ 15ಕ್ಕೂ ಹೆಚ್ಚು ತಳಿಯ ಹಣ್ಣುಗಳಿಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆಯಿತು.
ಈ ವರ್ಷದ ಮೇಳದ ಪ್ರಮುಖ ಆಕರ್ಷಣೆಯಾಗಿ ಜಿಲ್ಲೆಯಲ್ಲಿ ಬೆಳೆದ ಜಪಾನಿನ ದುಬಾರಿ ಮಿಯಾಜಾಕಿ ಮಾವು ಗಮನ ಸೆಳೆಯಿತು. ಜಿಲ್ಲೆಯ ಕಲ್ಲತಾವರಗೇರೆ ರೈತ ನಾಗಪ್ಪ ಬಗನಾಳ ಬೆಳೆದ 20 ಕೆ.ಜಿ. ಮಿಯಾಜಾಕಿ ಮಾವು ಪ್ರತಿ ಕೆ.ಜಿಗೆ 3000 ರೂ. ದರದಲ್ಲಿ ಮೊದಲ ದಿನವೇ ಮಾರಾಟವಾಯಿತು. ಮೇಳದಲ್ಲಿ 200ಕ್ಕೂ ಹೆಚ್ಚು ದೇಶಿ-ವಿದೇಶಿ ತಳಿಗಳ ಪ್ರದರ್ಶನ ಏರ್ಪಡಿಸಲಾಗಿದ್ದು, 60 ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡಿ ಖರೀದಿಸಿದರು.
ಕೊಪ್ಪಳ ಕೇಸರ್​ ಬ್ರಾಂಡ್​ ಬಾಕ್ಸ್​ ಹಾಗೂ ಬ್ಯಾಗ್​ಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿ 60 ಟನ್​ಗೂ ಹೆಚ್ಚು ಕೇಸರ್​ ಮಾವು ವಿವಿಧ ನಗರಗಳಿಗೆ ರವಾನೆಯಾಯಿತು. ರೈತರಿಗೆ ನೈಸರ್ಗಿಕ ಹಣ್ಣು ಮಾಗಿಸುವ ವಿಧಾನ, ರಫ್ತು ಮಾರುಕಟ್ಟೆ ಹಾಗೂ ಸಂಸ್ಕರಣೆ ಕುರಿತು ತಾಂತ್ರಿಕ ಮಾಹಿತಿ ನೀಡಲಾಯಿತು ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕೃಷ್ಣ ಉಕ್ಕುಂದ ತಿಳಿದ್ದಾರೆ.