ಕನಕಗಿರಿ ತಾಲೂಕಿನ ಬೊಮ್ಮಸಾಗರ ತಾಂಡಾ ಬಳಿ ಅರಣ್ಯ ಇಲಾಖೆ ಗುರುತಿಸಿರುವ ಜಮೀನು.
- 456.05 ಹೆಕ್ಟೇರ್ ಕಾಯ್ದಿಟ್ಟ ಪ್ರದೇಶವನ್ನಾಗಿಸಲು ನಿರ್ಧಾರ
- ರಸ್ತೆ ಡಾಂಬರೀಕರಣಕ್ಕೂ ತಡೆ
- ಬೊಮ್ಮಸಾಗರ- ಗುಡ್ಡದ ಲಕ್ಕುಂಪುರ ನಿವಾಸಿಗಳಿಗೆ ಸಂಕಷ್ಟ
ಕನಕಗಿರಿ: ತಾಲೂಕಿನ ಬೊಮ್ಮಸಾಗರ ಹಾಗೂ ಗುಡ್ಡದ ಲಕ್ಕುಂಪುರ ಸೀಮಾದಲ್ಲಿನ ಕೃಷಿ ಚಟುವಟಿಕೆ ನಡೆಯುತ್ತಿರುವ 456.05 ಹೆಕ್ಟೇರ್ ಭೂಮಿಯನ್ನು ಕಾಯ್ದಿಟ್ಟ ಅರಣ್ಯ ಪ್ರದೇಶವನ್ನಾಗಿಸಲು ಇಲಾಖೆ ಮುಂದಾಗಿದ್ದು, ತಾಂಡಾ, ಕರಿಯಮ್ಮ ಕ್ಯಾಂಪಿನ ಸಾಗುವಳಿದಾರರಿಗೆ ನೋಟಿಸ್ ನೀಡಲಾಗಿದೆ. ಇದರಿಂದ ರೈತರಿಗೆ ಒಕ್ಕಲೇಳುವ ಆತಂಕ ಶುರುವಾಗಿದೆ.
ಬೊಮ್ಮಸಾಗರ ವ್ಯಾಪ್ತಿಯ ಬೊಮ್ಮಸಾಗರ ತಾಂಡಾದಲ್ಲಿ 150 ಕುಟುಂಬಗಳಿದ್ದು, ಈಗ ಅರಣ್ಯ ಇಲಾಖೆ ಗುರುತಿಸಿರುವ ಸರ್ವೇ ನಂ.ಗಳಲ್ಲಿ ಕೃಷಿ ಮಾಡುತ್ತಿರುವ 50ಕ್ಕೂ ಹೆಚ್ಚು ಕುಟುಂಬಗಳಿಗೆ ನೋಟಿಸ್ ನೀಡಲಾಗಿದೆ. ಆದರೆ, ಗುಡ್ಡದ ಲಕ್ಕುಂಪುರ ಜನವಸತಿ ಪ್ರದೇಶ ಅಲ್ಲವಾಗಿದ್ದು, ಇಲಾಖೆ ಗುರುತಿಸಿರುವ ಜಮೀನುಗಳನ್ನು ಸಾಗುವಳಿ ಮಾಡುತ್ತಿರುವ ಕರಿಯಮ್ಮ ಕ್ಯಾಂಪಿನ ಹಲವು ರೈತರಿಗೆ ನೋಟಿಸ್ ನೀಡಿರುವುದು ನುಂಗಲಾರದ ತುತ್ತಾಗಿದೆ.
ಬೊಮ್ಮಸಾಗರ ತಾಂಡಾ ನಿವಾಸಿಗಳು ಅನೇಕರು ಕಬ್ಬು ಕಟಾವಿಗೆ ವಲಸೆ ಹೋಗುತ್ತಾರೆ. ಕೆಲವರು ಸರ್ಕಾರದಿಂದ ಮಂಜೂರಾಗಿದ್ದ ಜಮೀನಿನಲ್ಲಿ ಕೃಷಿ ಚಟುವಟಿಕೆ ಮಾಡುತ್ತಿದ್ದರು. ಈಗ ಆ ಭೂಮಿಗೂ ಅರಣ್ಯ ಇಲಾಖೆಯಿಂದ ಕಾಯ್ದಿಟ್ಟ ಅರಣ್ಯಕ್ಕಾಗಿ ನೋಟಿಸ್ ನೀಡಲಾಗಿದೆ. ಗುಡ್ಡಗಾಡಿನಲ್ಲಿ ವಾಸವಾಗಿ ಕೃಷಿ ಭೂಮಿಯನ್ನು ನಂಬಿಕೊಂಡಿದ್ದ ನಮಗೆ ಆ ಜಮೀನನ್ನು ಅರಣ್ಯ ಇಲಾಖೆ ಪಡೆದುಕೊಂಡರೆ, ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎನ್ನುವ ಆತಂಕದಲ್ಲಿ ರೈತರು ಹಾಸಿಗೆ ಹಿಡಿದಿದ್ದಾರೆ. ಕೆಲವರು ಊಟವನ್ನೇ ಬಿಟ್ಟಿದ್ದಾರೆ ಎನ್ನುತ್ತಾರೆ ತಾಂಡಾ ನಿವಾಸಿಗಳು.
ಯಾವ್ಯಾವ ಸರ್ವೇ ನಂಬರ್‌ಗಳು?
ಬಳ್ಳಾರಿಯ ಅರಣ್ಯ ಕ್ಷೇತ್ರ ನಿರ್ಧಾರಾಧಿಕಾರಿಗಳ ಕಾರ್ಯಾಲಯ ಸೆಕ್ಸನ್ 5ರ ಅಡಿ ಸೆ.15ಕ್ಕೆ ಘೋಷಿಸಿದೆ. ಅದರಲ್ಲಿ 1963ನೇ ಕರ್ನಾಟಕ ಅರಣ್ಯ ಅಧಿನಿಯಮದ (5)ನೇ ಪ್ರಕರಣ ಮೇರೆಗೆ ಹೈದರಾಬಾದ್ ಅರಣ್ಯ ಕಾಯ್ದೆ ಸಂ.2 ಮತ್ತು 10/01/1956ರ 1355 ಫಾಸ್ಲಿ ಜಿ.ಒ.ನಂ.ಎಫ್.ಎಸ್.ಟಿ/119/2/55 ಅಧಿಸೂಚನೆಯಂತೆ ರಾಜ್ಯ ಕಾಯ್ದಿಟ್ಟ ಅರಣ್ಯವೆಂದು ಕರ್ನಾಟಕ ರಾಜ್ಯಪತ್ರ ಪುಟ ಸಂಖ್ಯೆ 1ರಿಂದ 2ರವರೆಗೆ 1956ರ ಜ.10ರಂದು ಪ್ರಕಟಿಸಲಾಗಿದೆ. ಬೊಮ್ಮಸಾಗರ ಹಾಗೂ ಗುಡ್ಡದ ಲಕ್ಕುಂಪುರ ವ್ಯಾಪ್ತಿಯ ಸರ್ವೇ ನಂ.9, 10, 11, 12, 24, 20/1, 2, 22, 14ರ ಜಮೀನು ಗುರುತಿಸಲಾಗಿದೆ.
ರಾಮದುರ್ಗದಿಂದ ಬೊಮ್ಮಸಾಗರ ತಾಂಡಾಕ್ಕೆ ತೆರಳುವ ರಸ್ತೆಗೆ ಡಾಂಬರೀಕರಣ ಮಾಡುವಾಗ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ರಸ್ತೆ ಹಾದು ಹೋಗಿದ್ದರಿಂದ ಅಲ್ಲಿ ಡಾಂಬರೀಕರಣಕ್ಕೆ ಅರಣ್ಯ ಇಲಾಖೆ ದಶಕಗಳ ಹಿಂದೆಯೇ ತಡೆ ನೀಡಿದೆ. ಅಲ್ಲಿ 1 ಕಿ.ಮೀ ಜಲ್ಲಿಕಲ್ಲುಗಳಿಂದ ಕೂಡಿದ ರಸ್ತೆಯಿದ್ದು, ಆಗಿನಿಂದಲೂ ರೈತರಿಗೆ ಸುಳಿವು ಸಿಕ್ಕಿತ್ತು.
ಬಳ್ಳಾರಿಗೂ ಹೋಗಿ ಬಂದ ಕೃಷಿಕರು
ನೋಟಿಸ್ ನೀಡಿದಾಗಿನಿಂದ ನೆಮ್ಮದಿ ಕಳೆದುಕೊಂಡ ತಾಂಡಾದ ರೈತರು, 90 ದಿನಗಳ ಕಾಲ ತಕರಾರಿಗೆ ಅವಕಾಶವಿದ್ದರಿಂದ ನ.14ರಂದು 40ಕ್ಕೂ ಹೆಚ್ಚು ರೈತರು ಸಾಗುವಳಿ ಮಾಡುತ್ತಿರುವ ಜಮೀನು ಉಳಿಸಿಕೊಳ್ಳಲು ಬಳ್ಳಾರಿಯ ನಿರ್ಧಾರಾಧಿಕಾರಿಗಳ ಕಾರ್ಯಾಲಯದಲ್ಲಿ ದಾಖಲೆ ಸಹಿತ ಮನವಿ ಸಲ್ಲಿಸಿದ್ದಾರೆ.
ಬೊಮ್ಮಸಾಗರ, ಕರಿಯಮ್ಮ ಕ್ಯಾಂಪಿನ ರೈತರಿಗೆ ಅರಣ್ಯ ಇಲಾಖೆಯಿಂದ ನೀಡಲಾದ ನೋಟಿಸ್‌ಗಳನ್ನು ಪರಿಶೀಲನೆ ಮಾಡಲಾಗುವುದು.
ನಮ್ಮ ತಾತ, ಅಪ್ಪಂದಿರು ಅದೇ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದು, ಅದರಲ್ಲೇ ನಾವೂ ಜೀವನ ಕಂಡುಕೊಂಡಿದ್ದೇವೆ. ಆದರೆ, ಅಧಿಕಾರಿಗಳು ಆ ಜಮೀನನ್ನು ಅರಣ್ಯ ಪ್ರದೇಶವೆಂದು ಕಿತ್ತುಕೊಂಡರೆ. ಮಕ್ಕಳೊಂದಿಗೆ ಊರು ತೊರೆಯಬೇಕಾಗುತ್ತದೆ.
6 ಎಕರೆ ಜಮೀನಿದ್ದು, ಅರಣ್ಯ ಇಲಾಖೆಯವರು ನೋಟಿಸ್ ನೀಡಿದ್ದಾರೆ. ಇದರಿಂದ ನಮಗೆ ದಿಕ್ಕು ತೋಚದಾಗಿದೆ. ಜೀವನ ಸಾಗಿಸಲು ಹಾಗೂ ಮಕ್ಕಳಿಗಾಗಿ ಏನು ಮಾಡಬೇಕು.