ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ಶಿಫ್ಟ್
ಕೊಪ್ಪಳ: ಗಂಗಾವತಿ ತಾಲೂಕಿನ ಚಿಕ್ಕಜಂತಕಲ್ ಗ್ರಾಮದ 28 ವರ್ಷದ ಯುವತಿಯಲ್ಲಿ ಸೋಮವಾರ ಕರೊನಾ ಸೋಂಕು ದೃಢಪಟ್ಟಿದೆ.
ಮಹಿಳೆಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ತವರು ಮನೆಯಾದ ಎಮ್ಮಿಗನೂರಿಗೆ ಕೆಲ ದಿನಗಳ ಹಿಂದೆ ಹೋಗಿ ಬಂದಿದ್ದರು ಎನ್ನಲಾಗಿದೆ. ಕಳೆದೊಂದು ವಾರದಿಂದ ನರೇಗಾದಡಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಗರ್ಭೀಣಿಯೊಬ್ಬರನ್ನು ಗಂಗಾವತಿ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆಂದು ಕರದೊಯ್ದಿದ್ದಾರೆ.
ಈ ವೇಳೆ ಮಹಿಳೆ ಹೆಚ್ಚಾಗಿ ಕೆಮ್ಮುತ್ತಿರುವುದನ್ನು ಗಮನಿಸಿದ ವೈದ್ಯರು ಕೂಡಲೇ ಗಂಟಲು ದ್ರವದ ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳಿಸಿದ್ದರು.ವರದಿ ಪಾಸಿಟಿವ್ ಬಂದಿದ್ದರಿಂದ ಆಕೆಯನ್ನು ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಇವರೊಂದಿಗೆ ಗಂಡ, ಇಬ್ಬರು ಮಕ್ಕಳು, ಅಣ್ಣ, ಅಣ್ಣನ ಹೆಂಡತಿ ಸೇರಿ ಒಟ್ಟು 11 ಮಂದಿ ಪ್ರಾಥಮಿಕ ಸಂಪರ್ಕಿತರಿದ್ದಾರೆ. ಈಕೆಯ ಅಣ್ಣನ ಮನೆಯಲ್ಲಿ ಆತನ ತಂದೆ, ತಾಯಿ, ಸಹೋದರ ಮತ್ತು ಒಂದು ಮಗು ಸೇರಿ 10 ಜನ ದ್ವಿತೀಯ ಸಂಪರ್ಕಿತರಿದ್ದಾರೆ. ಸೋಂಕಿತ ಮಹಿಳೆ ಪತಿ ಆಟೋ ಚಾಲಕನಾಗಿದ್ದು, ಗಂಗಾವತಿ, ಕಂಪ್ಲಿ ಭಾಗದಲ್ಲಿ ಓಡಾಡಿದ್ದಾರೆ.
ಮಹಿಳೆಯೂ ಕೆಲಸದ ಸ್ಥಳ, ತವರು ಮನೆ ಸೇರಿ ಎಲ್ಲೆಂದರಲ್ಲಿ ಓಡಾಡಿದ್ದಾರೆ. ಈ ಮಹಿಳೆ ಸೋಂಕಿತರ ಸಂಪರ್ಕಕ್ಕೆ ಬರದೇ ಇದ್ದರೂ ಸೋಂಕು ಹೇಗೆ ತಗುಲಿತೆಂಬ ಬಗ್ಗೆ ಈವರೆಗೆ ಗೊತ್ತಾ ಗಿಲ್ಲ. ಹೀಗಾಗಿ ಇನ್ನಷ್ಟು ಜನರಿಗೆ ಸೋಂಕು ತಗುಲಿರುವ ಭೀತಿ ಸೃಷ್ಟಿಸಿದೆ.
100 ಮೀಟರ್ ಪ್ರದೇಶ ಸೀಲ್‌ಡೌನ್: ಅಧಿಕಾರಿಗಳು ಮಹಿಳೆ ವಾಸವಿದ್ದ ಮನೆಯ ಸುತ್ತಲಿನ 100 ಮೀಟರ್ ಪ್ರದೇಶವನ್ನು ಸೀಲ್ಡೌನ್ ಮಾಡಿದ್ದಾರೆ. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಿಸಲಾಗಿದ್ದು, ಮಹಿಳೆ ಟ್ರಾವೆಲ್ ಹಿಸ್ಟರಿ, ಸಿಡಿಆರ್ ಮಾಹಿತಿ ಕಲೆಹಾಕಲಾಗುತ್ತಿದ್ದು, ಹೆಚ್ಚಿನ ವಿವರ ಸಂಗ್ರಹಿಸಲಾಗುತ್ತಿದೆ.
ಮತ್ತೊಬ್ಬ ಬಿಡುಗಡೆ: ಮಸ್ಕಿ ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದ ಕುಷ್ಟಗಿ ತಾಲೂಕಿನ ಕೇಸೂರಿನ ಪಿ-2254 ಕರೊನಾ ಸೋಂಕಿನಿಂದ ಗುಣವಾಗಿದ್ದಾನೆ. ಹೀಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಯುವಕನಿಗೆ ಹೂ, ಹಣ್ಣು ನೀಡಿ ಆತ್ಮೀಯವಾಗಿ ಸೋಮವಾರ ಬೀಳ್ಕೊಟ್ಟರು. ಈ ಮೂಲಕ ಒಟ್ಟು ನಾಲ್ವರು ಸೋಂಕಿತರು ಗುಣವಾಗಿ ಮನೆ ಸೇರಿದಂತಾಗಿದೆ. ಈವರೆಗೂ ಒಟ್ಟು 7 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಐವರು ಗುಣವಾಗಿದ್ದಾರೆ. ಸದ್ಯ ಇಬ್ಬರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.