ಜಿಲ್ಲೆ

ಮನಸ್ಸಿನ ಆರೋಗ್ಯಕ್ಕೆ ಧ್ಯಾನ ಅವಶ್ಯ ಎಂದ ಸಂಸದ ಸಂಗಣ್ಣ ಕರಡಿ

ಕೊಪ್ಪಳ: ಮನಸ್ಸು ಏರುಪೇರಾದಾಗ ದೈಹಿಕ ಆರೋಗ್ಯ ಹಾಳಾಗುತ್ತದೆ. ಮನಸ್ಸಿನ ಆರೋಗ್ಯ ಸದೃಢವಾಗಿರಲು ಯೋಗ ಅವಶ್ಯ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ನಗರದ ಈಶ್ವರೀಯ ವಿವಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಯೋಗಾಸನ ಶಿಬಿರ ಉದ್ಘಾಟಿಸಿ ಮಾತನಾಡಿ, ನಾವು ಶರೀರಕ್ಕೆ ಬಹಳ ಮಹತ್ವ ಕೊಡುತ್ತೇವೆ. ಅದರಷ್ಟೇ ಮನಸ್ಸಿನ ಆರೋಗ್ಯವೂ ಮುಖ್ಯ. ಯೋಗ, ಧ್ಯಾನದಿಂದ ಮನಸ್ಸು ಉಲ್ಲಸಿತವಾಗಿರುತ್ತದೆ. ಧ್ಯಾನ ಒಂದು ಅದ್ಭುತ ಶಕ್ತಿ. ಅದರಲ್ಲಿ ನಾವು ತಲ್ಲೀನರಾದಾಗ ಮನಸ್ಸಿನಲ್ಲಿನ ಗೊಂದಲಗಳು ದೂರವಾಗುತ್ತವೆ.ಯೋಗ ಬಂದಿರುವುದು ಋಷಿಮುನಿಗಳಿಂದ. ಯೋಗಕ್ಕೆ ಇಡೀ ಜಗತ್ತು ಸ್ಪಂದಿಸುತ್ತಿದೆ. ಯೋಗದ ಸಂಸ್ಕೃತಿ ಮತ್ತು ಪರಂಪರೆಯನ್ನು ನಮ್ಮ ಪೂರ್ವಜರು ಹಾಕಿದ್ದಾರೆ ಎಂದರು.

ಬ್ರಹ್ಮಕುಮಾರಿ ಯೋಗಿನಿ ಅಕ್ಕ ಮಾತನಾಡಿ, ವಿಶ್ವಕ್ಕೆ ನಮ್ಮ ದೇಶ ಪರಿಚಯ ಆಗಿದ್ದೇ ಯೋಗ ಮತ್ತು ಅಧ್ಯಾತ್ಮದಿಂದ. ಯೋಗಾಸನ ಶರೀರದ ಆರೋಗ್ಯವನ್ನು ಸದೃಢ ಮಾಡುತ್ತದೆ. ಒಬ್ಬ ವ್ಯಕ್ತಿ ಪರಿಪೂರ್ಣ ಆರೋಗ್ಯವಂತನಾಗಲು ಶಾರೀರಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕವಾಗಿ ಆರೋಗ್ಯವಂತರಾಗಿರಬೇಕು. ಇಂದಿನ ಮನಸ್ಸಿನ ಒತ್ತಡದಿಂದ ಶರೀರದ ಕಾಯಿಲೆಗಳು ಜಾಸ್ತಿಯಾಗುತ್ತಿವೆ. ಅದಕ್ಕೆ ಮನೋದೈಹಿಕ ಕಾಯಿಲೆಗಳು ಎನ್ನುತ್ತಾರೆ ಎಂದರು. ಬಿ.ಕೆ. ಸ್ನೇಹಾ ಇತರರಿದ್ದರು.