ಜಿಲ್ಲೆ

ಸುರಕ್ಷತಾ ಕ್ರಮಗಳೊಂದಿಗೆ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸುವುದಾಗಿ ಹೇಳಿದ ಎಡಿಸಿ ಎಂ.ಪಿ.ಮಾರುತಿ

ಕೊಪ್ಪಳ: ಕರೊನಾ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳೊಂದಿಗೆ ಈ ಬಾರಿಯ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಲಾಗುವುದು ಎಂದು ಎಡಿಸಿ ಎಂ.ಪಿ.ಮಾರುತಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಕ ಉತ್ಸವ ಆಚರಣೆ ಸಂಬಂಧ ಸೋಮವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಸೆ.17ರಂದು ಉತ್ಸವ ಅಂಗವಾಗಿ ಬೆಳಗ್ಗೆ 8 ಗಂಟೆಗೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾಧಿಕಾರಿಗಳು ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು.

ಬಳಿಕ ಬೆಳಗ್ಗೆ 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಕೋವಿಡ್-19 ಹಿನ್ನೆಲೆಯಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಸರಳವಾಗಿ ಆಚರಿಸಲಿದ್ದು, ಹೆಚ್ಚು ಜನರು ಸೇರದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. 10 ವರ್ಷ ಕೆಳಗಿನ ಮಕ್ಕಳು, 60 ವರ್ಷ ಮೇಲ್ಪಟ್ಟವರು ಕಾರ್ಯಕ್ರಮಕ್ಕೆ ಬರದಂತೆ ನೋಡಿಕೊಳ್ಳಿ. ಆರೋಗ್ಯ ಇಲಾಖೆಯವರು ಕ್ರೀಡಾಂಗಣಕ್ಕೆ ಬರುವ ಎಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ ನಡೆಸಿ. ಮಾಸ್ಕ್ ಮತ್ತು ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಿ. ನಗರಸಭೆ ಪೌರಾಯುಕ್ತರು ಕ್ರೀಡಾಂಗಣದ ಸ್ವಚ್ಛತೆ ಕುರಿತು ಕ್ರಮ ಕೈಗೊಳ್ಳಿ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಕ್ರೀಡಾಂಗಣದಲ್ಲಿ ಪಥಸಂಚಲನ ನಡೆಯಲಿದ್ದು ನಿಗದಿತ ಸಂಖ್ಯೆಯ ತಂಡಗಳು ಮಾತ್ರ ಭಾಗವಹಿಸಲಿವೆ. ಆಯಾ ಕೆಲಸಗಳನ್ನು ಸಂಬಂಧಿಸಿದ ಅಧಿಕಾರಿಗಳು ಜವಾಬ್ದಾರಿಯಿಂದ ನಿರ್ವಹಿಸಬೇಕು. ಕ್ರೀಡಾಂಗಣದ ಅಲಂಕಾರ, ಲಘು ಉಪಹಾರ, ಪೊಲೀಸ್ ಭದ್ರತೆ, ವಿದ್ಯುತ್ ಅಲಂಕಾರ ಮುಂತಾದವುಗಳನ್ನು ಜವಾಬ್ದಾರಿಯಿಂದ ನಿರ್ವಹಿಸಿ ಎಂದು ಸೂಚಿಸಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ರಾಮೇಶ್ವರ, ಜಿಲ್ಲಾ ಸಂಖ್ಯಿಕ ಅಧಿಕಾರಿ ಕೃಷ್ಣಮೂರ್ತಿ ದೇಸಾಯಿ, ತಹಸೀಲ್ದಾರ ಜೆ.ಬಿ.ಮಜ್ಗಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಬಿಸಿಎಂ ಜಿಲ್ಲಾ ಅಧಿಕಾರಿ ದೊಡ್ಡಮನಿ ಇತರರಿದ್ದರು.