ಜಿಲ್ಲೆ

ವಾಲ್ಮೀಕಿ ಜಯಂತಿ ಅರ್ಥಪೂರ್ಣ ಆಚರಣೆ, ಎಡಿಸಿ ಸಿದ್ರಾಮೇಶ್ವರ ಹೇಳಿಕೆ

ಕೊಪ್ಪಳ: ಜಿಲ್ಲಾಡಳಿತದಿಂದ ಅ.17ರಂದು ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಎಡಿಸಿ ಸಿದ್ರಾಮೇಶ್ವರ ಸೂಚಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಶಿಷ್ಠಾಚಾರದಂತೆ ಆಮಂತ್ರಣ ಮುದ್ರಿಸಿ ಗಣ್ಯರನ್ನ ಆಹ್ವಾನಿಸಿ. ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ಅಚ್ಚುಕಟ್ಟಾಗಿ ಆಚರಿಸಿ. ನಗರದ ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರ ಮಾಡಿ. ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಶುಚಿತ್ವ ಕಾಪಾಡಿ. ಅಗತ್ಯ ಪೊಲೀಸ್​ ಭದ್ರತೆ ಒದಗಿಸಿ. ವೇದಿಕೆ ಕಾರ್ಯಕ್ರಮ ನಡೆಯುವ ಸಾಹಿತ್ಯ ಭವನದಲ್ಲಿ ಸ್ವಚ್ಛತೆ, ಕುಡಿವ ನೀರು ವ್ಯವಸ್ಥೆ ಮಾಡಿ. ನಾಡಗೀತೆ, ಸುಗಮ ಸಂಗೀತ, ಉಪನ್ಯಾಸ ಕಾರ್ಯಕ್ರಮ ಅಚ್ಚುಕಟ್ಟಾಗಿರಲಿ. ಸಮುದಾಯ ಜನರ ಸಹಕಾರವೂ ಅಗತ್ಯ ಎಂದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜು ತಳವಾರ ಮಾತನಾಡಿ, ಅ.17ರಂದು ಬೆಳಗ್ಗೆ 8.30ಕ್ಕೆ ನಗರದ ಸಿರಸಪ್ಪಯ್ಯನ ಮಠದಿಂದ ಸಾಹಿತ್ಯ ಭವನವರೆಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಪ್ರತಿಭಾವಂತ ಮಕ್ಕಳು, ಗಣ್ಯರಿಗೆ ಸನ್ಮಾನ ಇರಲಿದೆ ಎಂದರು.

ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ್​, ಡಿಡಿಪಿಐ ಶ್ರೀಶೈಲ ಬಿರಾದಾರ, ಡಿಡಿಪಿಯು ಜಗದೀಶ ಜೆ.ಎಚ್​., ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ, ವಾಲ್ಮೀಕಿ ಸಮುದಾಯ ಮುಖಂಡರಾದ ರಾಮಣ್ಣ ಕಲ್ಲನ್ನವರ, ರಾಮಣ್ಣ ಚೌಡ್ಕಿ, ಚನ್ನಪ್ಪ ತಳವಾರ, ಮಾರ್ಕಂಡೇಶ್ವರ ಕಲ್ಲಣ್ಣನವರ, ಬಸವರಾಜ ಶಹಾಪುರ, ಕೆ.ಎನ್​.ಪಾಟೀಲ, ಶರಣಪ್ಪ ನಾಯ್ಕರ, ಸುರೇಶ ಡೊಣ್ಣಿ, ಜೋಗದ ನಾರಾಯಣಪ್ಪ, ಜೋಗದ ಹನುಮಂತಪ್ಪ, ವೀರಭದ್ರಪ್ಪ ನಾಯಕ, ಶೇಖಣ್ಣ ಇಂದ್ರಗಿ, ಬಸನಗೌಡ ಪೋಲಿಸ್​ಪಾಟೀಲ್​ ಇತರರಿದ್ದರು.