ಜಿಲ್ಲೆ

ಶಿಥಿಲಗೊಂಡ ಕಟ್ಟಡ, ಪ್ರಾಣ ಭಯದಲ್ಲಿ ವಿದ್ಯಾರ್ಥಿಗಳು, ಕಣ್ತೆರೆದು ನೋಡಲಿ ಜನಪ್ರತಿನಿಧಿಗಳು

Kopala - Raveendra V K

ಕೊಪ್ಪಳ: ತಾಲೂಕಿನ ಬಹದ್ದೂರ ಬಂಡಿ ಗ್ರಾಮದ ಸರ್ಕಾರಿ ಶಾಲೆ ಶಿಥಿಲಗೊಂಡಿದ್ದು, ವಿದ್ಯಾರ್ಥಿಗಳು ಜಿವ ಭಯದಲ್ಲಿದ್ದಾರೆ‌. ಹೊಸ ಕಟ್ಟಡ ನಿರ್ಮಾಣ ಕಾರ್ಯ ನಡರದಿದ್ದರೂ ಎರಡು ವರ್ಷವಾದರೂ ಮುಗಿಯುವ ಲಕ್ಷಣಗಳಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ವಿದ್ಯಾರ್ಥಿಗಳು ಹಾಗೂ ಪಾಲಕರು ಶಾಲೆ ಮುಂದೆ ಧರಣಿ ನಡೆಸುತ್ತಿದ್ದಾರೆ.

ಒಂದರಿಂದ ಎಂಟನೇ ತರಗತಿವರೆಗೆ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಎರಡು ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿವೆ. ನೆಲಸಮ ಮಾಡಲು ಅಧಿಕಾರಿಗಳು ಪತ್ರ ನೀಡಿದ್ದಾರೆ.

ಹೊಸದಾಗಿ ಕೊಠಡಿಗಳನ್ನು ನಿರ್ಮಿಸುತ್ತಿದ್ದಾರೆ. ಎರಡು ವರ್ಷಗಳಾದರೂ ಕಾಮಗಾರಿ ಮುಗಿಯುತ್ತಿಲ್ಲ. ಹೀಗಾಗಿ ಮಕ್ಕಳು ಶಿಥಿಲ ಕಟ್ಟಡದಲ್ಲೇ ಪಾಠ ಕೇಳುವಂತಾಗಿದೆ.

ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು, ಜನ ಪ್ರತಿನಿಧಿಗಳು ಸ್ಪಂದಿಸಿಲ್ಲ. ಇದರಿಂದ ಬೇಸತ್ತ ಪಾಲಕರು ಹಾಗೂ ವಿದ್ಯಾರ್ಥಿಗಳು ಶಾಲಾ ಆವರಣದಲ್ಲೇ ಪ್ರತಿಭಟನೆ ಆರಂಭಿಸಿದ್ದಾರೆ.

ಬಿಇಒ ಶಂಕ್ರಯ್ಯ, ತಹಸೀಲ್ದಾರ್ ವಿಠ್ಠಲ‌ ಚೌಗಲಾ ಭೇಟಿ ನೀಡಿದ್ದಾರೆ. ಆದರೆ, ಜಿಲ್ಲಾಮಟ್ಟದ ಅಧಿಕಾರಿಗಳು ಬಂದು ಭರವಸೆ ನೀಡುವವರೆಗೆ ಧರಣಿ ಕೈ ಬಿಡುವುದಿಲ್ಲ ಎಂದು ಪ್ರತಿಭಟನಕಾರರು ಪಟ್ಟು ಹಿಡಿದಿದ್ದಾರೆ.