*ಕೆಲಸಕ್ಕೆ ಹಾಜರಾದವರಿಗೆ ವ್ಯಂಗ್ಯಭರಿತ ಆಕ್ರೋಶ
ಕೊಪ್ಪಳ: ಮುಷ್ಕರ ನಿರತ ಸಾರಿಗೆ ನೌಕರರ ಕುಟುಂಬದವರು ಬುಧವಾರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮಾರ್ಚ್ ತಿಂಗಳ ಸಂಬಳ ನೀಡುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ಎ.ಎಂ.ಮುಲ್ಲಾರನ್ನು ತರಾಟೆ ತೆಗೆದುಕೊಂಡರು.
ನಿಮ್ಮ ಮನೆಯವರನ್ನು ಕೆಲಸಕ್ಕೆ ಕಳುಹಿಸಿದ ಬಳಿಕ ಸಂಬಳ ಬಿಡುಗಡೆ ಮಾಡಲಾಗುವುದು. ಸರ್ಕಾರ ನೌಕರರ ಬೇಡಿಕೆ ಈಡೇರಿಸಲು ಸಿದ್ಧವಿದೆ. ಕರ್ತವ್ಯಕ್ಕೆ ಬಂದರೆ ಎಲ್ಲ ಸೌಲಭ್ಯಗಳು ಸಿಗಲಿವೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎ.ಎಂ.ಮುಲ್ಲಾ ಕುಟುಂಬದವರ ಮನವೊಲಿಸಲು ಯತ್ನಿಸಿದರು. ಆದರೆ, ವಿಭಾಗೀಯ ನಿಯಂತ್ರಣಾಧಿಕಾರಿ ಮಾತು ಕೇಳದ ನೌಕರರ ಕುಟುಂಬದವರನ್ನು ಪೊಲೀಸರು ನಿಷೇಧಾಜ್ಞೆ ಜಾರಿಯಲ್ಲಿದ್ದು, ಗಲಾಟೆ ಮಾಡದಂತೆ ಸೂಚಿಸಿ ಬಸ್ ನಿಲ್ದಾಣದಿಂದ ಹೊರಗೆ ಕಳುಹಿಸಿದರು.
ಏ.7ರಿಂದ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಬೇಡಿಕೆ ಈಡೇರುವವರೆಗೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲವೆಂದು ಹಠ ಹಿಡಿದಿದ್ದಾರೆ. ಸಾರಿಗೆ ಅಧಿಕಾರಿಗಳು ನೌಕರರ ಮನವೊಲಿಸಿ ಕೆಲವು ಬಸ್‌ಗಳ ಸಂಚಾರ ಆರಂಭಿಸಿದ್ದಾರೆ. ಮುಷ್ಕರ ನಿರತ ನೌಕರರ ಬಣದಲ್ಲಿ ಗುರುತಿಸಿಕೊಳ್ಳದವರು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಕೆಲಸಕ್ಕೆ ಬಂದಿರುವ ನೌಕರರಿಗೆ ಹೂವಿನ ಹಾರ ಹಾಕಿ ತಮ್ಮ ಕುಟುಂಬ ಕಣ್ಣಿರುಡುತ್ತಿರುವಾಗ ಕರ್ತವ್ಯಕ್ಕೆ ಬಂದಿದ್ದಕ್ಕೆ ಧನ್ಯವಾದ ಎಂದು ವ್ಯಂಗ್ಯವಾಗಿ ಆಕ್ರೋಶ ವ್ಯಕ್ತಪಡಿಸಿದರು.
ವಿಭಾಗೀಯ ಕಚೇರಿ ಕಡೆ ತೆರಳುತ್ತಿದ್ದ ಮಹಿಳೆಯರು ಕೆಲಸಕ್ಕೆ ಬಂದಿದ್ದ ನೌಕರನನ್ನು ತರಾಟೆ ತೆಗೆದುಕೊಂಡು ಹೂವಿನ ಹಾರ ಹಾಕಲು ಮುಂದಾದರು. ಅದಕ್ಕೆ ನೌಕರ ವಿರೋಧ ವ್ಯಕ್ತಪಡಿಸಿದ. ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯರನ್ನು ಅಲ್ಲಿಂದ ಕಳುಹಿಸಿದರು.