ಜಿಲ್ಲೆ

ಕೊಪ್ಪಳ ಗವಿಸಿದ್ಧೇಶ್ವರ ಶ್ರೀಗಳ ಪ್ರವಚನ ಮಾಲಿಕೆಗೆ ಚಾಲನೆ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಪ್ರವಚನ ಆಲಿಸಿ ಪಚನ ಮಾಡಿಕೊಂಡಲ್ಲಿ ಮನಸ್ಸಿನ ಮಾಲಿನ್ಯ, ಅಂಧಕಾರ ಶಮನಗೊಂಡು ಮಾನಸಿಕ ನೆಮ್ಮದಿ ದೊರೆಯುವದು ಎಂದು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ಶುಕ್ರವಾರ ವಿದ್ಯಾದಾನ ಸಮಿತಿಯ ಮೈದಾನದಲ್ಲಿ ಕೊಪ್ಪಳ ಸಂಸ್ಥಾನ ಗವಿಮಠದ ಅಭಿನವ ಗವಿಸಿದ್ಧೇಶ್ವರ ಶ್ರೀಗಳಿಂದ ನಡೆಯಲಿರುವ 10 ದಿನಗಳ ಆಧ್ಯಾತ್ಮ ಪ್ರವಚನ ಮಾಲಿಕೆಗೆ ಚಾಲನೆ ನೀಡಿ ಮಾತನಾಡಿದರು.
ವಚನ ಎಂದರೆ ವಿಶೇಷವಾಗಿ ಬಸವಾದಿ ಶಿವಶರಣರು, ಅನುಭಾವಿಗಳು ಬರೆದಿರುವ ನುಡಿಗಳೇ ವಚನ. ಆ ವಚನಗಳು ಪರಿಶುದ್ಧ ಹೃದಯದಿಂದ ಅಭಿವ್ಯಕ್ತಗೊಂಡ ಮುತ್ತು ರತ್ನಗಳಾಗಿವೆ. ಶರಣರು, ಸಂತರು ನಡೆದಂತೆ ನುಡಿದವರು. ನುಡಿದಂತೆ ನಡೆದವರು. ಅವರ ಮಾತು ನುಡಿಗಳನ್ನೇ ಕ್ರಮಬದ್ಧವಾಗಿ ಜೋಡಿಸಿ ಸುಂದರ ಮಾಲೆಯಾಗಿಸಿ ಅಭಿನವ ಗವಿಸಿದ್ಧೇಶ್ವರ ಶ್ರೀಗಳು ಜನರಿಗೆ ಅಪಿರ್ಸಲಿದ್ದಾರೆ ಎಂದರು.
ಶರಣರ ಅನುಭಾವದ ನುಡಿಗಳು ನಮ್ಮ ಇರುವಿಕೆಯನ್ನು ನಮಗೆ ತಿಳಿಸುವ ಕೆಲಸ ಮಾಡುತ್ತವೆ. ಅನುಭಾವ ಎಂಬುದು ಸತ್ಯವನ್ನು ನಿವೇದಿಸುವಂತದ್ದು. ನಾನು, ನನ್ನದು ಎಂಬುದು ಅಜ್ಞಾನದ ಸಂಕೇತ. ಶರಣ ಸಂದೇಶದಿಂದ ಬದುಕಿನಲ್ಲಿ ಬೆಳಕು ನೀಡಬಲ್ಲದು. ಈ ಹಿನ್ನಲೆಯಲ್ಲಿ ಕೊಪ್ಪಳ ಶ್ರೀಗಳ ಪ್ರವಚನ ಎಂದರೆ ನಮ್ಮ ಹೃದಯದಲ್ಲಿ ಜ್ಞಾನ ಜ್ಯೋತಿಯನ್ನು ಬೆಳಗಿಸುವಂತದ್ದು ಎಂದರು.
ಶಿವಾನಂದ ಮಠದ ಅಭಿನವ ಶಿವಾನಂದ ಶ್ರೀಗಳು, ಹೊಸಳ್ಳಿಯ ಸಂಸ್ಥಾನಮಠದ ಅಭಿನವ ಬೂದೀಶ್ವರ ಶ್ರೀಗಳು, ಕಪ್ಪತ್ತಗುಡ್ಡದ ನಂದಿವೇರಿಮಠದ ಶಿವಕುಮಾರ ಶ್ರೀಗಳು, ಆಧ್ಯಾತ್ಮ ವಿದ್ಯಾಶ್ರಮದ ಡಾ. ನೀಲಮ್ಮ ತಾಯಿಯವರು, ಬೆಟಗೇರಿಯ ಕುರುಹಿನಶೆಟ್ಟಿ ಸಮಾಜದ ನೀಲಕಂಠ ಪಟ್ಟದಾರ್ಯ ಶ್ರೀಗಳು ಮಾತನಾಡಿದರು.
ಕೊಪ್ಪಳ ಸಂಸ್ಥಾನ ಗವಿಮಠದ ಅಭಿನವ ಗವಿಸಿದ್ಧೇಶ್ವರ ಶ್ರೀಗಳು, ಲಡ್ಡು ಮುತ್ಯಾ, ಸಚಿವ ಎಚ್​.ಕೆ.ಪಾಟೀಲ, ಮಾಜಿ ಶಾಸಕ ಡಿ.ಆರ್​.ಪಾಟೀಲ, ಎಸ್​.ಎಸ್​.ಪಾಟೀಲ, ಜಿ.ಎಸ್​.ಗಡ್ಡದ್ದೇವರಮಠ, ಚಂದ್ರು ಬಾಳಿಹಳ್ಳಿಮಠ, ಗುರಣ್ಣ ಬಳಗಾನೂರ, ಬಾಲಚಂದ್ರ ಭರಮಗೌಡ್ರ ಹಲವರು ಇದ್ದರು.