ಜಿಲ್ಲೆ

ಒಳ‌ ಮೀಸಲು‌ ಜಾರಿಗೆ ಆಗ್ರಹಿಸಿ ಪ್ರತಿಭಟನೆ ಅ.16ಕ್ಕೆ

Kopala - Raveendra V K

ಕೊಪ್ಪಳ: ಸುಪ್ರೀಂ ಕೋರ್ಟ್ ತೀರ್ಪಿನಂತೆ ರಾಜ್ಯದಲ್ಲಿ ಒಳ‌ ಮೀಸಲು ಜಾರಿ ಮಾಡುವಂತೆ ಒತ್ತಾಯಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡಿಸಿ‌ ಕಚೇರಿ ಮುಂಭಾಗದಲ್ಲಿ ಅ.16 ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮಾದಿಗ ದಂಡೋರ ರಾಜ್ಯ ಅಧ್ಯಕ್ಷ ಹುಸೇನಪ್ಪ ಸ್ವಾಮಿ ಮಾದಿಗ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಹಲವು ವರ್ಷಗಳ ಹೋರಾಟ ಫಲವಾಗಿ ಸುಪ್ರೀಂ ಒಳ‌ ಮೀಸಲಾತಿಗೆ ಅನುಮತಿಸಿದೆ. ಮಾದಿಗ ಸಮುದಾಯ ಅನೇಕ ನೋವು ಅನುಭವಿಸಿದೆ. ನಮ್ಮ ಹೋರಾಟಕ್ಕೆ ಸರ್ಕಾರ ಬೆಂಬಲಿಸಿದೆ. ನ್ಯಾಯಾಲಯವೂ ರಾಜ್ಯಗಳಿಗೆ ಅಧಿಕಾರ ನೀಡಿದೆ. ಆದರೆ, ಕಾಣದ ಕೈಗಳ ಪಿತೂರಿಗೆ ಸಿಎಂ ಸಿದ್ದರಾಮಯ್ಯ ಒಳಗಾಗಿದ್ದಾರೆ. ತಾನೊಬ್ಬ ಅಹಿಂದ‌‌ ನಾಯಕ ಎಂದು ಹೇಳಿಕೊಳ್ಳುತ್ತಾರೆ. ಆದರೆ, ನಮಗೆ ಅನುಕೂಲ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆಂದು ದೂರಿದರು.

ಸುಮ್ಮನೇ ಹೈಕಮಾಂಡ್ ಹೆಸರು ಹೇಳಿ ದಿನ ದೂಡುವುದಲ್ಲ. ಇದನ್ನು ತಕ್ಷಣ ಜಾರಿ ಮಾಡಬೇಕು. ನ್ಯಾಯಾಂಗ ಸೂಚಿಸಿದರೂ ನಿರ್ಲಕ್ಷಿಸಿದರೆ ನಮ್ಮ ಹೋರಾಟ ಮುಂದುವರೆಯಲಿದೆ. ನಮ್ಮ ಹಕ್ಕು ಪಡೆಯುವವರೆಗೆ ಹೋರಾಟ ನಿಲ್ಲುವುದಿಲ್ಲ. ನಮ್ಮ ತಾಳ್ಮೆ‌ಮೀರಿ ಅನಾಹುತಗಳು ಸಂಭವಿಸಿದರೆ ಅದಕ್ಕೆ ಸಿಎಂ‌ ಸಿದ್ದರಾಮಯ್ಯ ನೇರ‌ ಹೊಣೆ.‌ ಜಾರಿ ಮಾಡಲು ಸಾಧ್ಯವಾದರೆ ಮಾಡಲಿ‌. ಇಲ್ಲ ರಾಜೀನಾಮೆ ನೀಡಿ‌ ಮನೆಗೆ ಹೋಗಲಿ ಎಂದರು.

ಅ.16ರಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಲಿದೆ. ಕೊಪ್ಪಳದಲ್ಲಿ ಸಾವಿರಾರು ಜನ ಸೇರಿ ಪ್ರತಿಭಟನೆ ಮಾಡಲಿದ್ದೇವೆ ಎಂದು ತಿಳಿಸಿದರು. ಸಮುದಾಯ ಮುಖಂಡರಾ ಸಿದ್ದೇಶ ಪೂಜಾರ, ಫಕೀರಪ್ಪ ಮೆಳ್ಳಿಕೇರಿ, ಡಿ.ಹುಲ್ಲೇಶ, ಗಾಳೇಶ ದೇವರಮನಿ, ಮೈಲಪ್ಪ‌ ಹೊಸಮನಿ ಇತರರಿದ್ದರು.