ಕೊಪ್ಪಳ: ಸುಪ್ರೀಂ ಹಾಗೂ ಹೈಕೋರ್ಟ್‌ಗಳ ಆದೇಶವಿದ್ದರೂ ರಾಜ್ಯ ಸರ್ಕಾರ ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ವಿತರಿಸಲು ಮೀನಮೇಷ ಎಣಿಸುತ್ತಿದೆ ಎಂದು ಆರೋಪಿಸಿ ಜಂಗಮ ಸಮುದಾಯ ಗುರುಗಳು ಹಾಗೂ ಮುಖಂಡರು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಸಮುದಾಯ ಮುಖಂಡ ಹಾಗೂ ವಕೀಲ ವಿ.ಎಂ.ಭೂಸನೂರಮಠ ಮಾತನಾಡಿ, ಬೇಡ ಜಂಗಮರಿಗೆ ಎಸ್ಸಿ ಪ್ರಮಾಣ ಪತ್ರ ನೀಡುವಂತೆ ಸುಪ್ರೀಂ, ಹೈಕೋರ್ಟ್‌ಗಳು ಹಲವು ಪ್ರಕರಣಗಳಲ್ಲಿ ತೀರ್ಪು ನೀಡಿವೆ. ಹೀಗಿದ್ದರೂ ಸರ್ಕಾರ, ಕಂದಾಯ ಅಧಿಕಾರಿಗಳು ನೀಡುತ್ತಿಲ್ಲ. ನಮ್ಮ ಮೂಲಭೂತ ಹಕ್ಕು ಪಡೆಯಲು ಜೂ.30ರಂದು ಬೆಂಗಳೂರಿನಲ್ಲಿ ಹೋರಾಟ ನಡೆಸಿದ್ದೇವೆ. ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಒಂದೆರಡು ದಿನದಲ್ಲಿ ಎಲ್ಲ ಜಿಲ್ಲಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆಗೆ ಆದೇಶಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೂ ಆದೇಶವಾಗಿಲ್ಲ. ಜಂಗಮ ಸಮಾವೇಶದಲ್ಲಿ ಭಾಗಿಯಾಗಲು ಬಂದ ಜನರನ್ನು ಬೆಂಗಳೂರಿನೊಳಗೆ ಬಿಡದೆ ಹೋರಾಟ ಹತ್ತಿಕ್ಕಲು ಸರ್ಕಾರ ಹವಣಿಸಿದೆ ಎಂದು ಆರೋಪಿಸಿದರು.
ಸಂವಿಧಾನದತ್ತವಾಗಿರುವ ಮೀಸಲಾತಿಯನ್ನು ಯಾರೂ ಕಸಿದುಕೊಳ್ಳುವಂತಿಲ್ಲ. ನ್ಯಾಯಾಲಯಗಳು ಸ್ಪಷ್ಟ ಆದೇಶ ನೀಡಿದ್ದರೂ ದುರುದ್ದೇಶದಿಂದ ಸಮುದಾಯಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಕೂಡಲೇ ಅರ್ಹ ಬೇಡ ಜಂಗಮರಿಗೆ ಎಸ್ಸಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿದರು. ಅಳವಂಡಿ ಸಿದ್ದೇಶ್ವರ ಸಂಸ್ಥಾನ ಮಠದ ಮರುಳಾರಾಧ್ಯ ಶಿವಾಚಾರ್ಯರು, ಜಂಗಮ ಸಮುದಾಯದ ಸಿದ್ದಯ್ಯ ಹಿರೇಮಠ, ಬಸಯ್ಯ ಹಿರೇಮಠ, ಪತ್ರಯ್ಯ ಸಸಿಮಠ, ಶರಣಯ್ಯ ಹಿರೇಮಠ, ವಿರೂಪಾಕ್ಷಯ್ಯ ಗದಗಿನಮಠ, ಗವಿಸಿದ್ದಯ್ಯ ಲಿಂಗಬಸಯ್ಯನಮಠ, ನಗರಸಭೆ ಸದಸ್ಯ ಬಸಯ್ಯ ಹಿರೇಮಠ, ಹಂಪಯ್ಯ ಮೆತಗಲ್ಲ, ದಯಾನಂದ, ನಾಗಭೂಷಣ ಸಾಲಿಮಠ, ಗಿರೀಶ ಹಿರೇಮಠ ಇತರರಿದ್ದರು.