ಕೊಪ್ಪಳ: ನಗರ ಸೇರಿ ತಾಲೂಕಿನ ವಿವಿಧೆಡೆ ಗುರುವಾರವೂ ಮಳೆ ಮುಂದುವರೆದಿದ್ದು ಜನ ಜೀವನ ಅಸ್ತವ್ಯಸ್ತವಾಯಿತು.
ಬುಧವಾರ ತಡರಾತ್ರಿಯಿಂದ ಆರಂಭವಾದ ಮಳೆರಾಯ ಗುರುವಾರ ಇಡೀ ದಿನ ಬಿಟ್ಟು ಬಿಡದೆ ಸುರಿದ. ಆಗಾಗ ಜಡಿದ ಮಳೆಗೆ ಜನರು ತತ್ತರಿಸಿದರು. ಮೂರು ದಿನದಿಂದ ಮಳೆ ಸುರಿಯುತ್ತಿದ್ದು ಕೃಷಿ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿದೆ. ಕಟಾವು ಕಾರ್ಯ ಸ್ಥಗಿತಗೊಂಡಿವೆ. ಹಿಂಗಾರು ಬಿತ್ತನೆ ಕಾರ್ಯಕ್ಕೂ ಹಿನ್ನಡೆಯಾಗಿದ್ದು, ರಾಶಿ ಚಟುವಟಿಕೆಗಳಿಗೆ ಹರಸಾಹಸ ಪಡುವಂತಾಗಿದೆ.
ಕೊಪ್ಪಳ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಪರದಾಡುವಂತಾಯಿತು. ಬಸ್ ನಿಲ್ದಾಣದಲ್ಲಿ ನೀರು ತುಂಬಿಕೊಂಡಿದ್ದು ಪ್ರಯಾಣಿಕರು ಕಷ್ಟಪಟ್ಟು ರಸ್ತೆಗೆ ಬರುವಂತಾಗಿದೆ. ಚರಂಡಿಗಳು ತುಂಬಿಕೊಂಡಿದ್ದು ಸರಿಯಾಗಿ ನೀರು ಹರಿದು ಹೋಗದೇ ರಸ್ತೆಯಲ್ಲಿಯೇ ನಿಂತುಕೊಳ್ಳುವಂತಾಗಿದೆ.