ಕೊಪ್ಪಳ: ರಾಜ್ಯದ ವಿವಿಧೆಡೆ ಪಿಎಫ್‌ಐ ನಾಯಕರ ಮೇಲೆ ತನಿಖಾ ತಂಡಗಳ ದಾಳಿ ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪದಾಧಿಕಾರಿಗಳು ಗುರುವಾರ ನಗರದ ಅಶೋಕ ವೃತ್ತದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.
ವಿವಿಧ ಪ್ರಕರಣಗಳ ತನಿಖೆ ಹೆಸರಿನಲ್ಲಿ ನಮ್ಮ ನಾಯಕರು, ಕಾರ್ಯಕರ್ತರ ಮೇಲೆ ದಾಳಿ ಮಾಡಲಾಗುತ್ತಿದೆ. ಏಕಕಾಲಕ್ಕೆ ದಾಳಿ ನಡೆಸಿ ದ್ವೇಷ ತೀರಿಸಿಕೊಳ್ಳಲಾಗುತ್ತಿದೆ. ಅನಗತ್ಯವಾಗಿ ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ. ವಿನಾಕಾರಣ ಬಂಧನ ಮಾಡಲಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಕಾಲ ಮಾನವ ಸರಪಳಿ ರಚಿಸಿದ ಮುಖಂಡರು, ಬಿಜೆಪಿ ಕುಮ್ಮಕ್ಕಿನಿಂದ ದುರುದ್ದೇಶದ ದಾಳಿ ನಡೆದಿದೆ. ಕೆ.ಜಿ.ಹಳ್ಳಿ ಪ್ರಕರಣ ಬಗ್ಗೆ ತನಿಖಾ ತಂಡಗಳ ಮುಖ್ಯಸ್ಥರಲ್ಲೇ ದ್ವಂದ್ವವಿದೆ ಎಂದು ಆರೋಪಿಸಿದರು. ಸಂಘಟನೆಯ ಪದಾಧಿಕಾರಿಗಳಾದ ರಸೂಲ್, ಮೆಹಬೂಬ್, ಇರ್ಫಾನ್ ಇತರರಿದ್ದರು.