ಜಿಲ್ಲೆ

ಕ್ವಾರಂಟೈನ್ ಸೆಂಟರ್‌ಗೆ ಡಿಸಿ ಪಿ.ಸುನಿಲ್‌ಕುಮಾರ್ ಭೇಟಿ

Koppal

ಕೊಪ್ಪಳ: ತಳಕಲ್ ಇಂಜಿನಿಯರಿಂಗ್ ಕಾಲೇಜು ಕ್ವಾರಂಟೈನ್ ಸೆಂಟರ್‌ಗೆ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲೆಯಲ್ಲಿ ಮೂರು ಕರೊನಾ ಪ್ರಕರಣಗಳು ಕಾಣಿಸಿಕೊಂಡಿವೆ. ಇನ್ನು 235 ಮಾದರಿಗಳ ವರದಿ ಬರಬೇಕಿದೆ. 42 ಕ್ವಾರಂಟೈನ್ ಸೆಂಟರ್‌ಗಳನ್ನು ಮಾಡಿದ್ದು, ಹೊರರಾಜ್ಯದಿಂದ ಬಂದವರನ್ನೆಲ್ಲ ಕ್ವಾರಂಟೈನ್ ಮಾಡಿಸಲಾಗುತ್ತಿದೆ. ಹೀಗಾಗಿ ಸೆಂಟರ್‌ಗೆ ಭೇಟಿ ನೀಡಿದ ಡಿಸಿ, ಆಹಾರ ಸೇರಿ ಇತರ ಮೂಲಸೌಕರ್ಯ ವ್ಯವಸ್ಥೆ ಪರಿಶೀಲಿಸಿದರು.

ಜಿಲ್ಲಾಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆ ಮಾಡಿದ್ದು, ಇತರ ಚಿಕಿತ್ಸೆಗಳಿಗೆ ಬೇರೆಡೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಇದರಿಂದ ಜನರಿಗೆ ಸಮಸ್ಯೆಯಾಗುತ್ತಿದ್ದು, ಕರೊನಾ ಪ್ರಕರಣಗಳೊಟ್ಟಿಗೆ ಇತರ ಚಿಕಿತ್ಸೆಯನ್ನು ಜಿಲ್ಲಾಸ್ಪತ್ರೆಯಲ್ಲಿ ಆರಂಭಿಸಲು ಚಿಂತಿಸಲಾಗುತ್ತಿದೆ. ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ತೆರಳಿ ಚಿಕಿತ್ಸೆ ವ್ಯವಸ್ಥೆ ವೀಕ್ಷಿಸಿದರು. ಅಲ್ಲಿಂದ ಕಿಮ್ಸ್‌ಗೆ ತೆರಳಿ ಲ್ಯಾಬ್ ಕಾಮಗಾರಿ ಪ್ರಗತಿ ಪರಿಶೀಲಿಸಿದರು. ಈಗಾಗಲೇ ಶೇ.90 ಕಾಮಗಾರಿ ಪೂರ್ಣಗೊಂಡಿದ್ದು, ಮಷೀನ್‌ಗಳನ್ನು ಅಳವಡಿಸಲಾಗುತ್ತಿದೆ. ಈ ತಿಂಗಳ ಅಂತ್ಯಕ್ಕೆ ಲ್ಯಾಬ್ ಸಿದ್ಧಗೊಳ್ಳುವ ಬಗ್ಗೆ ಅಧಿಕಾರಿಗಳು ತಿಳಿಸಿದರು.

ಕಿಮ್ಸ್ ನಿರ್ದೇಶಕ ಡಾ.ವಿಜಯನಾಥ ಇಟಗಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಬಿ.ದಾನರಡ್ಡಿ, ಡಿಎಚ್‌ಒ ಡಾ.ಟಿ.ಲಿಂಗರಾಜು ಇತರರಿದ್ದರು.