ಕೊಪ್ಪಳ: ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ತ್ಯಾಜ್ಯ ಸಾಗಣೆ ವಾಹನ ಚಾಲಕರ ಸೇವೆ ಕಾಯಂಗೊಳಿಸುವುದು ಸೇರಿ ಇತರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಗತಿಪರ ತ್ಯಾಜ್ಯ ವಾಹನ ಚಾಲಕರು ಮತ್ತು ಸಹಾಯಕರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹಲವು ವರ್ಷದಿಂದ ನಾವು ಸೇವೆ ಸಲ್ಲಿಸುತ್ತಿದ್ದರೂ ಸರ್ಕಾರದ ಸೌಲಭ್ಯಗಳು ಸಿಕ್ಕಿಲ್ಲ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು ಸರಿಯಾದ ಸಮಯಕ್ಕೆ ವೇತನ ಪಾವತಿಯಾಗುತ್ತಿಲ್ಲ. ಗುತ್ತಿಗೆದಾರರು ನಿಯಬದ್ಧವಾಗಿ ಸೇವೆ ನೀಡುತ್ತಿಲ್ಲ. ಗುತ್ತಿಗೆ ನಿಯಮ ಮೀರಿ ನಮ್ಮಿಂದ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ನಗರ, ಪಟ್ಟಣ, ಗ್ರಾಮ ಸ್ವಚ್ಛವಾಗಿಡುವಲ್ಲಿ ನಮ್ಮ ಕೆಲಸ ಬಹುಮುಖ್ಯ. ನಮ್ಮನ್ನು ಪೌರ ಕಾರ್ಮಿಕರೆಂದು ಸರ್ಕಾರ ಪರಿಗಣಿಸುತ್ತಿಲ್ಲ. ಒಂದೇ ವಿಭಾಗದಲ್ಲಿ ಸೇವೆ ಸಲ್ಲಿಸಿದರೂ ನೇಮಕಾತಿ, ಸೌಲಭ್ಯ ಕಲ್ಪಿಸುವಲ್ಲಿ ತಾರತಮ್ಯ ಮಾಡುತ್ತಿದ್ದಾರೆಂದು ಆರೋಪಿಸಿದರು.
ನಮ್ಮ ಸೇವಾ ಕಾಯಂಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಪಾವತಿಸಿ. ಕೆಲಸದ ವೇಳೆ ನಿಧನರಾದಲ್ಲಿ ಕುಟುಂಬದವರಿಗೆ 10ಲಕ್ಷ ರೂ. ಪರಿಹಾರ ನೀಡಬೇಕು. ವಸತಿ ಸೌಲಭ್ಯ ಕಲ್ಪಿಸಬೇಕು. ನಮ್ಮ ಮಕ್ಕಳಿಗೆ ಸ್ನಾತಕೋತ್ತರ ಶಿಕ್ಷಣ ಉಚಿತವಾಗಿ ನೀಡಬೇಕು. ಕೆಲಸದ ಸ್ಥಳದಲ್ಲಿ ಕುಡಿವ ನೀರು, ವಿಶ್ರಾಂತಿ ಕೊಠಡಿ, ಶೌಚಗೃಹ ಇತ್ಯಾದಿ ಸೌಕರ್ಯ ಕಲ್ಪಿಸಬೇಕು. ಅಧಿಕಾರಿಗಳು, ಸಾರ್ವಜನಿಕರು ನಮ್ಮನ್ನು ಗೌರವದಿಂದ ಕಾಣಬೇಕು. ಗುತ್ತಿಗೆ ಪದ್ಧತಿ ಕೈ ಬಿಟ್ಟು ನೇರ ನೇಮಕಾತಿ ಮಾಡಬೇಕೆಂದು ಒತ್ತಾಯಿಸಿದರು. ಪ್ರತಿಭಟನಕಾರರಾದ ಗಿಡ್ಡಪ್ಪ, ಸಣ್ಣ ಹನುಮಂತಪ್ಪ, ಕೇಶವ ನಾಯಕ, ಪರಶುರಾಮ ಸೇರಿ ಇತರರಿದ್ದರು.