ಕೊಪ್ಪಳ ತಾಲೂಕಿನ ಟಣಕನಕಲ್ ಗ್ರಾಮದಲ್ಲಿ ಶುಕ್ರವಾರ ಶಾಸಕ ರಾಘವೇಂದ್ರ ಹಿಟ್ನಾಳ್ ಶಾಲಾ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. 
ಜಿಲ್ಲೆ

ಬಡವರು, ರೈತರನ್ನು ಮರೆತಿರುವ ಬಿಜೆಪಿ ಸರ್ಕಾರ

Koppal

ಕೊಪ್ಪಳ: ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಬಡವರು, ರೈತರನ್ನು ನಿರ್ಲಕ್ಷಿಸಿದ್ದು, ಜನಪರ ಯೋಜನೆಗಳನ್ನು ಜಾರಿ ಮಾಡುತ್ತಿಲ್ಲವೆಂದು ಶಾಸಕ ರಾಘವೇಂದ್ರ ಹಿಟ್ನಾಳ್ ಟೀಕಿಸಿದರು.

ತಾಲೂಕಿನ ಲೇಬಗೇರಿ ಜಿಪಂ ವ್ಯಾಪ್ತಿಯ ಹನುಮನಹಳ್ಳಿ, ಟಣಕನಕಲ್, ಹಟ್ಟಿ , ಕಲಕೇರಿ, ದೇವಲಾಪುರ, ಚಿಲವಾಡಗಿ, ಓಜನಹಳ್ಳಿ ಯತ್ನಟ್ಟಿ, ಹುಚ್ಚೇಶ್ವರ ಕ್ಯಾಂಪ್, ನರೆಗಲ್ ಹಾಗೂ ಮಾದಿನೂರು ಗ್ರಾಮಗಳಲ್ಲಿ 2 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳಿಗೆ ಶುಕ್ರವಾರ ಭೂಮಿಪೂಜೆ ನೇರವೇರಿಸಿ ಮಾತನಾಡಿದರು.

ಸರ್ವರಿಗೂ ಸಮಪಾಲು, ಸಮಬಾಳು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳುತ್ತಾರೆ. ಆದರೆ, ದಿನ ಕಳೆದಂತೆ ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರುತ್ತಿದ್ದು, ಜನಸಾಮಾನ್ಯರು ಬದುಕುವುದು ಕಷ್ಟವಾಗಿದೆ. ಮಳೆಯಿಂದ ಹಾನಿಯಾಗಿರುವ ಮನೆಗಳಿಗೆ ಬಿಡಿ ಕಾಸು ನೀಡಿಲ್ಲ. ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳಿಗೆ ನೀಡಿದ ಮಹತ್ವಾಕಾಂಕ್ಷಿ ಯೋಜನೆಗಳಾದ ವಿದ್ಯಾಸಿರಿ, ಉಚಿತ ಲ್ಯಾಪ್‌ಟಾಪ್ ಯೋಜನೆ ಸ್ಥಗಿತಗೊಂಡಿವೆ. ಹಾಸ್ಟೆಲ್ ದೊರೆಯದ ವಿದ್ಯಾರ್ಥಿಗಳು ಏನು ಮಾಡಬೇಕು? ಅನ್ನ ಭಾಗ್ಯದ ಬಡವರ ಪಾಲಿನ ಅಕ್ಕಿಯನ್ನು ಕಸಿಯಲು ಯೋಚಿಸುತ್ತಿದ್ದು, ಜನರು ಏನು ಮಾಡಬೇಕು. ಜನತೆ ಬಿಜೆಪಿ ಡುರಾಡಳಿತದಿಂದ ಬೇಸತ್ತಿದ್ದು, ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಶೋಷಿತ ವರ್ಗಗಗಳ ದನಿಯಾಗಿರುವ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗ್ರಾಪಂ ಸದಸ್ಯರಾದ ನಬಿಸಾಬ್, ಸಿದ್ದಪ್ಪ ಹೊಸಗೇರಿ, ಯಮನುರಪ್ಪ ನಾಯಕ, ಮುಖಂಡರಾದ ಪ್ರಸನ್ನ ಗಡಾದ, ಅಂಬರೀಷ ಉಪಲಾಪುರ, ರಾಮಣ್ಣ ಹದ್ದಿನ, ವಿರಣ್ಣ ಸೊಂಡುರು, ಮುಕ್ಕಣ್ಣ ಹೊಸಗೇರಿ, ಮೈಲಾರಪ್ಪ ಟಣಕನಕಲ್ ಇತರರಿದ್ದರು.