ಕೊಪ್ಪಳ: ಯಲಬುರ್ಗಾ, ಕೊಪ್ಪಳ ನಗರ ಹಾಗೂ ಹುಲಗಿ ಗ್ರಾಮದಲ್ಲಿ ನಡೆದ ಕಳ್ಳತನ ಪ್ರಕರಣಗಳನ್ನು ಭೇದಿಸಿದ್ದು, ಬಂಧಿತರಿಂದ ನಗರ, ಬಂಗಾರ ಹಾಗೂ ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ ತಿಳಿಸಿದರು.
ಯಲಬುರ್ಗಾ ಪಟ್ಟಣದ ರವಿತೇಜ ಎಂಬುವರ ಮನೆಯಲ್ಲಿ 2023ರ ಜುಲೈ 7ರಂದು ಕಳ್ಳತನ ನಡೆದಿತ್ತು. ಮನೆ ಬೀಗ ಮುರಿದು 1 ತೊಲ ಬಂಗಾರ, 15 ತೊಲ ಬೆಳ್ಳಿ, ನಗದು ಸೇರಿ 2.69 ಲಕ್ಷ ರೂ. ಕಳ್ಳತನವಾಗಿದೆ. ಬಾಗಲಕೋಟೆ ಜಿಲ್ಲೆ, ಬದಾಮಿ ನಗರದ ಮಹಿಬೂಬ ನಗರದ ಕ್ರುಸಾಬ ಜಾತಗಾರ ಎಂಬಾತನನ್ನು ಬಂಧಿಸಿ ವಿಚಾರಿಸಿದಾಗ ಕದ್ದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಬೆರಳಚ್ಚು ಮಾದರಿ ಪರಿಶೀಲಿಸಿದಾಗ 2021ರಲ್ಲಿ ಯಲಬುರ್ಗಾ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿರುವುದು ಪತ್ತೆಯಾಗಿದೆ. ಆರೋಪಿಯಿಂದ 82.5ಗ್ರಾಂ ಬಂಗಾರ ಆಭರಣ, 150 ಗ್ರಾಂ ಬೆಳ್ಳಿ ಆಭರಣ ಸೇರಿ 5.27 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇನ್ನು ಮುನಿರಾಬಾದ್ ಠಾಣೆ ವ್ಯಾಪ್ತಿಯ ಹುಲಗಿ ಗ್ರಾಮದ ಶರಣಪ್ಪ ಚನ್ನಾಳ ಎಂಬುವರ ಮನೆಯಲ್ಲಿ ಜು.3ರಂದು 5.95 ಲಕ್ಷ ರೂ. ಮೌಲ್ಯದ 85 ಗ್ರಾಂ ಬಂಗಾರ ಆಭರಣ ಕಳ್ಳತನ ನಡೆದಿದೆ. ಪ್ರಕರಣದಲ್ಲಿ ಹೊಸಪೇಟೆಯ ಇಪ್ಪತ್ತೇರಿ ಮಾಗಣಿಯ ರಿಜ್ವಾನ್ ಪಾಷಾ ಹಾಗೂ ಮೌಲಾಹುಸೇನ್ ಕೊಂಡಿ ಎಂಬಾತನ ಕಳ್ಳತನ ಮಾಡಿದ್ದು ವೈಜ್ಞಾನಿಕ ತನಿಖೆಯಲ್ಲಿ ದೃಢಪಟ್ಟಿದೆ. ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ 5.95 ಲಕ್ಷ ರೂ. ಮೌಲ್ಯದ 81.66 ಗ್ರಾಂ ಬಂಗಾರ ಆಭರಣ ಜಪ್ತಿ ಮಾಡಿಕೊಂಡಿದ್ದೇವೆ.
ಕೊಪ್ಪಳ ನಗರದ ಬಸ್ ನಿಲ್ದಾಣ ಮುಂಭಾಗದಲ್ಲಿ ಶ್ರೀಕಾಂತ ಹಂಚಿನಾಳ ಎಂಬುವರ 50 ಸಾವಿರ ರೂ. ಬೆಲೆಯ ಬೈಕ್ ಕಳೆದ ಜೂನ್ 20ರಂದು ಕಳ್ಳತನವಾಗಿದೆ. ಪ್ರಕರಣದಲ್ಲಿ ಕೊಪ್ಪಳ ತಾಲೂಕಿನ ಉಪ್ಪಿನ ಬೆಟಗೇರಿಯ ಶ್ರೀಕಾಂತ ಎಂಬಾತನ ಮೇಲೆ ಅನುಮಾನಗೊಂಡು ವಿಚಾರಿಸಿದಾಗ ಬೈಕ್ ಕದ್ದ ಬಗ್ಗೆ ಒಪ್ಪಿಕೊಂಡಿದ್ದಾನೆ. ಈತನಿಂದ ಒಟ್ಟು ಮೂರು ಬೈಕ್ಗಳನ್ನು ವಶಕ್ಕೆ ಪಡೆದಿದ್ದು, ಅವುಗಳ ಮೌಲ್ಯ 2.10 ಲಕ್ಷ ರೂ. ಆಗಿದೆ. ಮೂರು ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಎಲ್ಲ ಪ್ರರಕಣಗಳಲ್ಲಿ ನಮ್ಮ ಡಿವೈಎಸ್ಪಿ, ಸಿಪಿಐ, ಪಿಐ, ಪಿಎಸ್ಐ ಹಾಗೂ ಇತರ ಸಿಬ್ಬಂದಿ ವೈಜ್ಞಾನಿಕ ತನಿಖೆ ನಡೆಸಿ ಭೇದಿಸಿದ್ದಾರೆ. ಅವರಿಗೆಲ್ಲ ಸೂಕ್ತ ಬಹುಮಾನ ನೀಡಲಾಗುವುದೆಂದರು.
ಎಎಸ್ಪಿ ಹೇಮಂತ್ ಕುಮಾರ್, ಡಿವೈಎಸ್ಪಿ ಮುತ್ತಣ್ಣ ಸರವಗೋಳ, ಸಿಪಿಐ ಸುರೇಶ ಡಿ., ಪಿಐ ಜಯಪ್ರಕಾಶ ಇತರರಿದ್ದರು.