ಕೊಪ್ಪಳ: ಶಾಲಾ ಬಾಲಕಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದಾತ ಹಾಗೂ ಆತನಿಗೆ ಸಹಕರಿಸಿದ ಮುಖ್ಯ ಶಿಕ್ಷಕಿಗೆ ಸಾದಾ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಜಿಲ್ಲಾ ಪೋಕ್ಸೋ ನ್ಯಾಯಾಲಯ ಸೆ.25ರಂದು ಆದೇಶಿಸಿದೆ.
ಬೆಳಗಾವಿಯ ಶಶಿಧರ ನಾಯ್ಕ ಹಾಗೂ ಮುಖ್ಯ ಶಿಕ್ಷಕಿ ಬಸಮ್ಮ ನಾರಾಯರೆಡ್ಡಿ ಶಿಕ್ಷೆಗೆ ಗುರಿಯಾದವರು. 2023 ಜನೆವರಿ 1ರಂದು 9ನೇ ತರಗತಿ ಬಾಲಕಿಗೆ ಶಶಿಧರ ನಾಯ್ಕ ಲೈಂಗಿಕ ಕಿರುಕುಳ ನೀಡಿದ್ದಾಗಿ ಕೊಪ್ಪಳ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ಪಿಐ ಆಂಜನೇಯ ಡಿ.ಎಸ್. ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಆರೋಪ ಸಾಬೀತಾಗಿದ್ದು, ಶಶಿಧರ ನಾಯ್ಕಗೆ 3 ವರ್ಷ ಸಾದಾ ಶಿಕ್ಷೆ 10 ಸಾವಿರ ರೂ.ದಂಡ ವಿಧಿಸಲಾಗಿದೆ. ಶಿಕ್ಷಕಿಗೆ 6 ತಿಂಗಳು ಸಾದಾ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಗೌರಮ್ಮ ದೇಸಾಯಿ ವಾದ ಮಂಡಿಸಿದ್ದಾರೆ.