ಕೊಪ್ಪಳದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭಾರತ ಕಂಡ ಸ್ವಾತಂತ್ರ್ಯ ಹೋರಾಟಗಾರರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಉದ್ಘಾಟಿಸಿದರು. ಹಜರತ್ ಮುಫ್ತಿ ನಜೀರ್ ಅಹ್ಮದ್ ಖಾದ್ರಿ ತಸ್ಕೀನ್, ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಮುನಿರಾಬಾದ್ ಕಾಡಾ ಅಧ್ಯಕ್ಷ ಹಸನ್‌ಸಾಬ್ ದೋಟಿಹಾಳ, ಪ್ರಮುಖರಾದ ಸುರೇಶ ಭೂಮರಡ್ಡಿ, ರಾಜಶೇಖರ ಆಡೂರು, ಅಕ್ಬರ್ ಪಲ್ಟನ್, ಮೌಲಾ ಹುಸೇನ್ ಜಮೆದಾರ, ಪೀರಾಹುಸೇನ್ ಇದ್ದರು. 
ಜಿಲ್ಲೆ

ಅನೇಕರ ತ್ಯಾಗದಿಂದ ಲಭಿಸಿದೆ ಭಾರತಕ್ಕೆ ಸ್ವಾತಂತ್ರ್ಯ

ಕೊಪ್ಪಳ: ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಭಾರತೀಯರು ಹೋರಾಡಿದ್ದಾರೆ. ಅವರಾರೂ ಜಾತಿ, ಧರ್ಮದ ಹೆಸರಿನಲ್ಲಿ ಪ್ರಾಣಾರ್ಪಣೆ ಮಾಡಲಿಲ್ಲ. ದೇಶಕ್ಕಾಗಿ ಮಡಿದರು. ಇದನ್ನು ನಾವೆಲ್ಲ ಅರಿಯಬೇಕು ಎಂದು ಯೂಸೂಫಿಯಾ ಮಸೀದಿಯ ಹಜರತ್ ಮುಫ್ತಿ ನಜೀರ್ ಅಹ್ಮದ್ ಖಾದ್ರಿ ತಸ್ಕೀನ್ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಮುಸ್ಲಿಮ್ ಯುವ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಭಾರತ ಕಂಡ ಸ್ವಾತಂತ್ರ್ಯ ಹೋರಾಟಗಾರರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾವೆಲ್ಲ ಇತಿಹಾಸ ಸರಿಯಾಗಿ ಅರಿಯಬೇಕು. ಅವೆಲ್ಲರೂ ತ್ಯಾಗ, ಬಲಿದಾನದಿಂದ ನಾವಿಂದು ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ. ಇಲ್ಲದಿದ್ದರೆ ನಾವೆಲ್ಲ ಬ್ರಿಟಿಷರ ಗುಲಾಮರಾಗಿ ಇರಬೇಕಿತ್ತು. ಎಷ್ಟು ಜನ ಹೋರಾಡಿದರೆಂಬ ನಿಖರತೆ ಇಲ್ಲ. ಟಿಪ್ಪು ಸುಲ್ತಾನನನ್ನು ಶತ್ರುಗಳು ಹೊಗಳಿದರೆ, ನಮ್ಮವರು ಅವರ ಪಠ್ಯ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಇಂಥ ಕಾರ್ಯಕ್ರಮಗಳ ಅಗತ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಉಪನ್ಯಾಸಕ ಚಂದ್ರಶೇಖರ ಮಾತನಾಡಿ, ಟಿಪ್ಪು ಸುಲ್ತಾನನನ್ನು ಹೊರತುಪಡಿಸಿ ದೇಶದ ಚರಿತ್ರೆ ನೋಡಲು ಸಾಧ್ಯವಿಲ್ಲ. ಹಾಗೆ ಅಂದುಕೊಳ್ಳುವವರು ಅವಿವೇಕಿಗಳು. ಅವರು ಕೇವಲ ಮೈಸೂರಿಗೆ ಹುಲಿ ಅಲ್ಲ. ಹಿಂದುಸ್ತಾನದ ಹುಲಿ. 5 ಕಿ.ಮೀ.ಗೆ ಒಂದರಂತೆ ಕನ್ನಡ ಶಾಲೆ ನಿರ್ಮಿಸಿದಾತ. ಮನೆಯಲ್ಲಿ ಕನ್ನಡ ಮಾತನಾಡುತ್ತಿದ್ದ. ತಾನೊಬ್ಬ ಕನ್ನಡಿಗ ಎಂದು ಹೆಮ್ಮೆಯಿಂದ ಹೇಳಿಕೊಂಡಾತ. ಬ್ರಿಟಿಷರ ಎದೆ ನಡುಗಿಸಿದ ವೀರ. ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲಿ ಓದಿಸುವವರು ಟಿಪ್ಪು ಒಬ್ಬ ಕನ್ನಡ ದ್ರೋಹಿ ಎನ್ನುತ್ತಿರುವುದು ಹಾಸ್ಯಾಸ್ಪದ. ಅಂಥವರೆಲ್ಲ ಇತಿಹಾಸ ನೋಡುವ ದೃಷ್ಟಿಕೋನ ಬದಲಿಸಿಕೊಳ್ಳಬೇಕು. ಅಂಬೇಡ್ಕರ್ ದೃಷ್ಟಿಕೋನದಲ್ಲಿ ಇತಿಹಾಸ ಅರಿಯಬೇಕು ಎಂದು ತಿಳಿಸಿದರು.

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕಾರ್ಯಕ್ರಮ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಮಾಜಿ ಸಂಸದ ಸಂಗಣ್ಣ ಕಡಿ, ಸಂಚಾಲಕ ಎಂ. ಕಾಟನ್ ಪಾಷಾ, ಕೆ.ಎಂ.ಸೈಯ್ಯದ್, ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ ಬಾಷುಸಾಬ್ ಖತೀಬ್ ಮಾತನಾಡಿದರು.

ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಮುನಿರಾಬಾದ್ ಕಾಡಾ ಅಧ್ಯಕ್ಷ ಹಸನ್‌ಸಾಬ್ ದೋಟಿಹಾಳ, ಪ್ರಮುಖರಾದ ಸುರೇಶ ಭೂಮರಡ್ಡಿ, ರಾಜಶೇಖರ ಆಡೂರು, ಅಕ್ಬರ್ ಪಲ್ಟನ್, ಮೌಲಾ ಹುಸೇನ್ ಜಮೆದಾರ, ಪೀರಾ ಹುಸೇನ್ ಮುಜಾವರ್, ಆಸೀಪ್ ಕರ್ಕಿಹಳ್ಳಿ, ಸಲೀಂ ಮಂಡಲಗೇರಿ, ಖಾಜಾವಲಿ ಬನ್ನಿಕೊಪ್ಪ ಸೇರಿ ಇತರರಿದ್ದರು.

ಕುರಾನ್, ಸಂವಿಧಾನದಂತೆ ಬದುಕಿ

ಭಾರತೀಯ ಮುಸ್ಲಿಮರಿಗೆ ಕುರಾನ್ ಮತ್ತು ಸಂವಿಧಾನ ಮುಖ್ಯ. ಅದರಂತೆ ಬದುಕಬೇಕು. ಕಾನೂನು ಚೌಕಟ್ಟಿನೊಳಗೆ ಅನ್ಯಾಯದ ವಿರುದ್ಧ ಹೋರಾಡಬೇಕೆಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದರು. ಸೃಷ್ಟಿಕರ್ತನ ಕಾನೂನು ಕುರಾನ್. ಅಂಬೇಡ್ಕರ್ ಬರೆದ ಸಂವಿಧಾನದಂತೆ ಭಾವೈಕ್ಯತೆಯಿಂದ ಜೀವನ ಸಾಗಿಸಬೇಕು. ಯಾವುದೇ ಕಾರಣಕ್ಕೂ ನಮ್ಮ ಆಚರಣೆಗಳಿಂದ ಇತರರಿಗೆ ತೊಂದರೆ ಆಗಬಾರದು. ನಮ್ಮ ಧರ್ಮ ಪ್ರೀತಿಸುವ ಜತೆಗೆ ಇತರ ಧರ್ಮ ಗೌರವಿಸಬೇಕು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕರ ಆದರ್ಶ ಅಳವಡಿಸಿಕೊಳ್ಳಬೇಕು. ಕೋಮುವಾದಿ ಶಕ್ತಿಗಳು ಅಮಾಯಕ ಯುವಕರಲ್ಲಿ ಜಾತಿ ವಿಷ ಬೀಜ ಬಿತ್ತುತ್ತಿವೆ. ಅನವಶ್ಯಕ ಗೊಂದಲ ಸೃಷ್ಟಿಸಿ ಎತ್ತಿಕಟ್ಟುವ ಕೆಲಸವಾಗುತ್ತಿದೆ. ಅಂಥವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ವಿಧಾನಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ನನ್ನ ಪಕ್ಷದ ಕೆಲವರು ಕಾರಣ. ಅವರಿಗೆ ಅನ್ಸಾರಿ ಅಂದರೆ ಭಯ ಜಾಸ್ತಿ. ಅದಕ್ಕೆ ಹಿಂದಿನಿಂದ ಬೆನ್ನಿಗೆ ಚೂರಿ ಹಾಕಿದ್ದಾರೆ. ಕೊಪ್ಪಳದಲ್ಲಿ 40 ಸಾವಿರ ಮುಸ್ಲಿಮರಿದ್ದಾರೆ. ಶಾಸಕ ಹಿಟ್ನಾಳ ಗೆಲುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಶಾಸಕ, ಸಂಶದರು ಯಾವತ್ತೂ ಅವರ ಕೈ ಬಿಡಬೇಡಿ. ಬೇಡಿಕೆ ಈಡೇರಿಸಿ. ಹೆಚ್ಚು ಅನುದಾನ ತಂದು ಅಭಿವೃದ್ಧಿಪಡಿಸಿ ಎಂದು ಸಲಹೆ ನೀಡಿದರು. ಶಾಸಕ ರಾಘವೇಂದ್ರ ಹಿಟ್ನಾಳ, ಮುಸ್ಲಿಮ್ ಸಮುದಾಯ ಋಣ ನಮ್ಮ ಕುಟುಂಬದ ಮೇಲಿದೆ. ಏನೇ ಸಮಸ್ಯೆಗಳಿದ್ದರೂ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವೆ. ವಿಶೇಷ ಅನುದಾನ ತರುವ ಯತ್ನ ಮಾಡುವೆ ಎಂದರು.