ಜಿಲ್ಲೆ

60 ಟಿಎಂಸಿ ಅಡಿ ನೀರು ಖಾಲಿ ಆಗಲೇಬೇಕು

ಕೊಪ್ಪಳ: ತುಂಗಭದ್ರಾ ಜಲಾಶಯದ ಗೇಟ್‌ ಸಂಖ್ಯೆ 19ರಲ್ಲಿ ಚೈನ್‌ ಲಿಂಕ್‌ ಮುರಿದು ಹೋಗಿದ್ದು ಅದನ್ನು ಸರಿಪಡಿಸಲು ಕನಿಷ್ಠ 60 ಟಿಎಂಸಿ ಅಡಿ ನೀರನ್ನು ಖಾಲಿ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಜಲಾಶಯಕ್ಕೆ ಭಾನುವಾರ ಬೆಳಗಿನ ಜಾವ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿದರು.

19ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಕಟ್ ಆಗಿದ್ದು ಅನಿವಾರ್ಯವಾಗಿ ನೀರು ಬಿಡಬೇಕಾಗಿದೆ. ಈ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಸದ್ಯದ ಮಟ್ಟಿಗೆ 60ರಿಂದ 65 ಟಿಎಂಸಿ ಅಡಿಗೂ ಹೆಚ್ಚು ನೀರು ಖಾಲಿ ಮಾಡಬೇಕು. ಕನಿಷ್ಠ 20 ಅಡಿ ನೀರು ಖಾಲಿಯಾದರೆ ಮಾತ್ರ ನಿಖರವಾಗಿ ಸಮಸ್ಯೆ ಏನಾಗಿದೆ ಎನ್ನುವುದು ಗೊತ್ತಾಗಲಿದೆ ಎಂದರು.

ಆಣೆಕಟ್ಟು ಕಟ್ಟಿದ ವಿನ್ಯಾಸ ತರಿಸಿಕೊಳ್ಳಲಾಗಿದ್ದು, ನೀರಿನ ರಭಸ ಹೆಚ್ಚಿರುವ ಕಾರಣ ಕೆಳಗಡೆ ಇಳಿದು ರಿಪೇರಿ ಕೆಲಸ ಮಾಡಲು ಆಗುತ್ತಿಲ್ಲ. ಸದ್ಯ ಒಂದು ಲಕ್ಷ ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದೆ. 2.50 ಲಕ್ಷ ಕ್ಯುಸೆಕ್‌ ವರೆಗೆ ಬಿಡಬೇಕು. ಘಟನೆ‌ ಕುರಿತು ಸಿಎಂ, ಡಿಸಿಎಂ‌ಗೆ ಮಾಹಿತಿ ನೀಡಿದ್ದೇವೆ ಎಂದರು.

ಕಡಿಮೆ ಸಮಯದಲ್ಲಿ ಸಮಸ್ಯೆ ಪರಿಹರಿಸಲು ಬೆಂಗಳೂರು, ಹೈದರಾಬಾದ್‌, ಚೆನ್ನೈನಿಂದ ತಜ್ಞರ ತಂಡ ಬಂದಿದೆ. ಚರ್ಚಿಸಿ ಮುಂದಿನ ನಿರ್ಧಾರ ಮಾಡಲಾಗುವುದೆಂದರು.