ಚಿನ್ನದ ತಾಳಿ ಪತ್ತೆ ಮಾಡಿ ಮರಳಿಸಿದ ಗೃಹರಕ್ಷಕ ಸಿಬ್ಬಂದಿ ಮಂಜುನಾಥಗೆ ಸಂಗೀತಾ ಕುಟುಂಬದವರು ಕೊಪ್ಪಳ ತಾಲೂಕಿನ ಮುನಿರಾಬಾದ್​ನಲ್ಲಿ ಸನ್ಮಾನಿಸಿದರು. 
ಜಿಲ್ಲೆ

ರೈಲಿನಲ್ಲಿ ಕಳೆದ ತಾಳಿ ಹುಲಿಗಿಯಲ್ಲಿ ಸಿಕ್ತು !

  • ಸಮಯ ಪ್ರಜ್ಞೆ ಮೆರೆದ ಗೃಹರಕ್ಷಕ ಸಿಬ್ಬಂದಿ
  • ಆಧಾರ್​ ಕಾರ್ಡ್​ನಿಂದ ಸಿಕ್ಕ ಕಳ್ಳಿ

ವಿಜಯವಾಣಿ ವಿಶೇಷ ಕೊಪ್ಪಳ

ರೈಲಿನಲ್ಲಿ ಮಹಿಳೆಯೊಬ್ಬಳು ಕಳೆದುಕೊಂಡಿದ್ದ ಲಾಂತರ ರೂ. ಬೆಲೆಯ ಚಿನ್ನದ ತಾಳಿ ಸೇರಿ ಇತರ ವಸ್ತುಗಳಿರುವ ಬ್ಯಾಗ್​ ಅನ್ನು ಆಧಾರ್​ ಕಾರ್ಡ್​ ನೆರವಿನಿಂದ ಕಳ್ಳಿಯಿಂದ ಪತ್ತೆ ಮಾಡಿದ ಗೃಹ ರಕ್ಷಕ ಸಿಬ್ಬಂದಿ ಮಹಿಳೆಗೆ ಕರೆ ಮಾಡಿ ಪೊಲೀಸರ ಮೂಲಕ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾನೆ. ಕಳೆದ ವಸ್ತು ವಾಪಸ್​ ಪಡೆದುಕೊಂಡ ಮಹಿಳೆ ಕುಟುಂಬದವರು ಆತನನ್ನು ಸನ್ಮಾನಿಸಿ ಕೃತಜ್ಞೆ ತೋರಿದ್ದಾರೆ.

ಹಾವೇರಿ ಜಿಲ್ಲೆ, ಶಿಗ್ಗಾಂವ್​ ತಾಲೂಕಿನ ಶಿಶುನಾಳ ಗ್ರಾಮದ ಸಂಗೀತಾ ಎಂಬ ಮಹಿಳೆ ಕುಟುಂಬದವರೊಡನೆ ಜು.13ರಂದು ಬೆಂಗಳೂರಿನಿಂದ ಸವಣೂರಿಗೆ ರೈಲಿನಲ್ಲಿ ಪ್ರಯಾಣಿಸಿದ್ದರು. ತನ್ನ ಚಿನ್ನದ ತಾಳಿ, ಬಟ್ಟೆ, ಆಧಾರ್​ ಕಾರ್ಡ್​ ಸೇರಿ ಇತರ ವಸ್ತುಗನ್ನು ಬ್ಯಾಗ್​ನಲ್ಲಿಟ್ಟಿದ್ದರು. ಹರಿಹರ ಬಳಿ ಪರೀಸಿಕೊಂಡಾ ಬ್ಯಾಗ್​ ಕಳೆದಿರುವುದು ಗಮನಕ್ಕೆ ಬಂದಿದೆ. ರೈಲಿನಲ್ಲಿ ಹುಡುಕಾಡಿದರೂ ಸಿಕ್ಕಿಲ್ಲ. ಬಳಿಕ ರೈಲ್ವೆ ಪೊಲೀಸರಿಗೆ ದೂರು ಸಲ್ಲಿಸಿ ಸುಮ್ಮನಾಗಿದ್ದಾರೆ.

ಇತ್ತ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ಸನ್ನಿಧಾನಕ್ಕೆ ನಿತ್ಯ ಲಾಂತರ ಜನರು ಆಗಮಿಸುತ್ತಾರೆ. ಭಾನುವಾರ (ಜು.28) ಬಾಲಕಿಯೊಬ್ಬಳು ಬ್ಯಾಗ್​ ಹಾಕಿಕೊಂಡು ದೇವಸ್ಥಾನಕ್ಕೆ ಬಂದಿದ್ದಾಳೆ. ಆಕೆಯನ್ನು ಗಮನಿಸಿದ ಗೃಹರಕ್ಷಕ ದಳ ಸಿಬ್ಬಂದಿ ಮಂಜುನಾಥ ವಿಚಾರಿಸಿದ್ದಾನೆ. ತಾನು ಹುಬ್ಬಳ್ಳಿಯಿಂದ ಬಂದಿದ್ದಾಗಿ ಬಾಲಕಿ ತಿಳಿಸಿದ್ದಾಳೆ. ಮನೆಯಲ್ಲಿ ಜಗಳ ಮಾಡಿಕೊಂಡು ಹುಲಿಗಿಗೆ ಆಗಮಿಸಿರುವುದಾಗಿ ಸುಳ್ಳು ಹೇಳಿದ್ದಾಳೆ. ಅನುಮಾನಗೊಂಡ ಮಂಜುನಾಥ ಆಧಾರ್​ ಕಾರ್ಡ್​ ತೋರಿಸುವಂತೆ ಕೇಳಿದ್ದಾರೆ.

ಬ್ಯಾಗ್​ ಪರಿಶೀಲಿಸಿದಾಗ ಸಂಗೀತಾ ಹೆಸರಿನ ಆಧಾರ್​ ಕಾರ್ಡ್​ ಸಿಕ್ಕಿದೆ. ಅದರಲ್ಲಿನ ಮೊಬೈಲ್​ ನಂಬರ್​ಗೆ ಕರೆ ಮಾಡಿದಾಗ ಸಂಗೀತಾ ತಮ್ಮ ಬ್ಯಾಗ್​ ಕಳೆದುಕೊಂಡಿದ್ದೆ. ಅದರಲ್ಲಿ ಲಾಂತರ ರೂ. ಬೆಲೆ ಬಾಳುವ ಚಿನ್ನದ ತಾಳಿ ಇದ್ದ ಬಗ್ಗೆ ಮಾಹಿತಿ ನೀಡಿದ್ದಾರೆ. ಬ್ಯಾಗ್​ ಪರಿಶೀಲಿಸಿದಾಗ ಚಿನ್ನದ ತಾಳಿ ಸಿಕ್ಕಿದೆ. ಬಾಲಕಿ ಬಳಿ ಮೊಬೈಲ್​ ಸಹ ಇತ್ತು. ಆಕೆ, ತಮ್ಮ ಮನೆಯವರಿಗೆ ಕರೆ ಮಾಡಿ ತಿಳಿಸುವೆ. ಅವರು ಬರುವರೆಂದು ಹೇಳಿದ್ದಾಳೆ.
ಸರಿ ಎಂದು ಚಿನ್ನದ ಮಾಂಗಲ್ಯ ಹಾಗೂ ಆಧಾರ್​ ಪಡೆದುಕೊಂಡ ಮಂಜುನಾಥ, ತಮ್ಮ ಕರ್ತವ್ಯಕ್ಕೆ ತೆರಳಿದ್ದಾರೆ. ವಾಪಸ್​ ಬರುವ ವೇಳೆಗೆ ಬಾಲಕಿ ಅಲ್ಲಿಂದ ಪರಾರಿಯಾಗಿದ್ದಾಳೆ. ತಕ್ಷಣ ಈ ಬಗ್ಗೆ ಮುನಿರಾಬಾದ್​ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸಂಗೀತಾಗೆ ಕರೆ ಮಾಡಿದ್ದಾರೆ.

ಕುಟುಂಬದವರೊಡನೆ ಬಂದ ಸಂಗೀತಾ ಚಿನ್ನದ ಸರ ಖರೀದಿಸಿದ ದಾಖಲಾತಿ ನೀಡಿ ವಿವರಿಸಿದ್ದಾರೆ. ಖಚಿತಪಡಿಸಿಕೊಂಡ ಪೊಲೀಸರು ಅವರಿಗೆ ಆಧಾರ್​ ಕಾರ್ಡ್​ ಹಾಗೂ ಮಾಂಗಲ್ಯ ಸರ ಮರಳಿಸಿದ್ದಾರೆ. ಕಳೆದುಕೊಂಡ ತಾಳಿ ಮರಳಿ ಸಿಗಲು ಕಾರಣವಾದ ಮಂಜುನಾಥಗೆ ಸಂಗೀತಾ ಕುಟುಂಬದವರು ಸನ್ಮಾನಿಸಿ ಕೃತಜ್ಞೆ ತೋರಿದ್ದಾರೆ.

ನಾನು ಹುಲಿಗೆಮ್ಮ ದೇವಿ ದೇವಸ್ಥಾನ ಮುಂದೆ ಕರ್ತವ್ಯದಲ್ಲಿದ್ದೆ. ಆಗ ಬಾಲಕಿಯೊಬ್ಬಳು ಅನುಮಾನಾಸ್ಪದವಾಗಿ ಕಂಡಳು. ಯಾರೆಂದು ವಿಚಾರಿಸಿದೆ. ಆಕೆ ತಮ್ಮೂರು ಹುಬ್ಬಳ್ಳಿ. ಮನೆಯವರೊಂದಿಗೆ ಜಗಳವಾಡಿ ಬಂದಿರುವೆ ಎಂದಳು. ಅನುಮಾನ ಬಂದು ಆಧಾರ್​ ಕಾರ್ಡ್​ ತೋರಿಸಲು ಹೇಳಿದೆ. ಸಂಗೀತಾ ಹೆಸರಿನ ಕಾರ್ಡ್​ ಸಿಕ್ಕಿತು. ಅದರಲ್ಲಿನ ನಂಬರ್​ಗೆ ಕರೆ ಮಾಡಿದಾಗ ಬ್ಯಾಗ್​ ಹಾಗೂ ಚಿನ್ನದ ತಾಳಿ ಕಳೆದ ಬಗ್ಗೆ ಅವರು ತಿಳಿಸಿದರು. ವಶಕ್ಕೆ ಪಡೆದು ಪೊಲೀಸರಿಗೆ ಮಾಹಿತಿ ನೀಡಿ ಮಹಿಳೆಗೆ ವಾಸಪ್​ ಮಾಡಿರುವೆ. ಮಂಜುನಾಥ.
ಮಂಜುನಾಥ.
ಜು.13ರಂದು ಬೆಂಗಳೂರಿನಿಂದ ಸವಣೂರಿಗೆ ರೈಲಿನಲ್ಲಿ ಪ್ರಯಾಣಿಸಿದ್ದೆವು. ಚಿನ್ನದ ತಾಳಿ ಇರುವ ಬ್ಯಾಗ್​ ಕಳೆದಿತ್ತು. ಎಲ್ಲರನ್ನೂ ವಿಚಾರಿಸಿದರೂ ಕೇಳಿ ರೈಲ್ವೆ ಪೊಲೀಸರಿಗೆ ದೂರು ಸಲ್ಲಿಸಿದ್ದೆ. ಮರಳಿ ಸಿಗುವುದಿಲ್ಲವೆಂದು ಬಹಳ ನಿರಾಸೆಯಾಗಿತ್ತು. ಆದರೆ, ಹುಲಿಗಿಯ ಹೋಂ ಗಾರ್ಡ್​ ಮಂಜುನಾಥ ಎಂಬುವರು ಪತ್ತೆ ಮಾಡಿ ಮುನಿರಾಬಾದ್​ ಪೊಲೀಸರ ಮೂಲಕ ಮರಳಿಸಿದ್ದಾರೆ. ಅವರಿಗೆ ತುಂಬಾ ಧನ್ಯವಾದ. ಸಂಗೀತಾ ಚನ್ನಬಸಪ್ಪ ಕೆರೂರ.
ಸಂಗೀತಾ ಚನ್ನಬಸಪ್ಪ ಕೆರೂರ.