ಕೊಪ್ಪಳ: ಕೃಷಿ ಸೇರಿ ವಿವಿಧ ಇಲಾಖೆಗಳಡಿ ಅನುಷ್ಠಾನ ಆಗುವ ಸರ್ಕಾರಿ ಯೋಜನೆಗಳಿಗೆ ಬ್ಯಾಂಕುಗಳು ಸಾಲ ನೀಡುತ್ತಿಲ್ಲ. ಎಲ್ಲ ದಾಖಲೆ ಸರಿ ಇದ್ದಾಗಲೂ ಸಾಲ ನೀಡದಿದ್ದರೆ ಹೇಗೆ ? ಈ ಬಗ್ಗೆ ಆರ್ಬಿಐಗೆ ಪತ್ರ ಬರೆದು ಸೂಕ್ತ ನಿರ್ದೇಶನ ಪಡೆಯಿರಿ ಎಂದು ಸಂಸದ ರಾಜಶೇಖರ ಹಿಟ್ನಾಳ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಪಂ ದಿಶಾ ಸಮಿತಿ ಸಭೆಯ ಅದ್ಯಕ್ಷತೆವಹಿಸಿ ಮಾತನಾಡಿದರು.
ಕೃಷಿ ಇಲಾಖೆಯಡಿ ಪಿಎಂ ಕಿರು ಆಹಾರ ಸಂಸ್ಕರಣಾ ಟಕ ಯೋಜನೆಯಡಿ 200 ಗುರಿ ಇದ್ದರೂ ಸಾಧನೆ ಆಗಿಲ್ಲವೆಕೆಂದು ಸಂಸದರು ಪ್ರಶ್ನಿಸಿದರು. ಬ್ಯಾಂಕಿನಿಂದ ಸಾಲ ದೊರೆಯದ ಕಾರಣ ಅನುಷ್ಠಾನವಾಗಿಲ್ಲವೆಂದು ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್.ಗಮನಕ್ಕೆ ತಂದರು. ಸಿಇಒ ರಾಹುಲ್ ರತ್ನಂ ಪಾಂಡೆಯ, ಎಲ್ಲ ದಾಖಲೆ ಸರಿ ಇದ್ದಾಗಲೂ 6 ತಿಂಗಳು ಸಮಯದೂಡಿ ಏಕಾಏಕಿ ಅರ್ಜಿ ತಿರಸ್ಕರಿಸುತ್ತಿದ್ದಾರೆಂದರು. ಡಿಸಿ ನಲಿನ್ ಅತುಲ್, ಒಂದೊಂದು ಬ್ಯಾಂಕಿನಲ್ಲಿ ಒಂದೊಂದು ಮಾದರಿಯಡಿ ದಾಖಲಾತಿ ಕೇಳುತ್ತಾರೆ. ಇದರಿಂದ ಸಮಸ್ಯೆ ಆಗುತ್ತಿದೆ ಎಂದು ಗಮನ ಸೆಳೆದರು.
ಸಂಸದರು ಮಾತನಾಡಿ, ಯೋಜನೆ ಬಗ್ಗೆ ಸರಿಯಾಗಿ ಪ್ರಚಾರ ಆಗಲಿ. ಲೀಡ್ ಬ್ಯಾಂಕ್ ಅಧಿಕಾರಿಗಳು ಬ್ಯಾಂಕ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಬೇಕು. ಸರ್ಕಾರಿ ಯೋಜನೆಗೆ ಸಾಲ ನೀಡದಿದ್ದೆ ಹೇಗೆ ? ವ್ಯಾಪರಿಗಳಿಗೆ ರಾಜಾತಿಥ್ಯ ನೀಡಿ, ಸಾಲ ಕೊಡುವ ಬ್ಯಾಂಕರ್ಗಳು ಕೃಷಿ ಆಧಾರಿತ ಯೋಜನೆ ನೀಡದಿರುವುದು ಸರಿಯಲ್ಲ. ಇದನ್ನು ಸಹಿಸಲಾಗದು ಎಂದು ಲೀಡ್ ಬ್ಯಾಂಕ್ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ತಕ್ಷಣ ಆರ್ಬಿಐಗೆ ಪತ್ರ ಬರೆದು ಕೇಂದ್ರ ಯೋಜನೆಗಳಿಗೆ ಬ್ಯಾಂಕ್ ಸಾಲ ಪಡೆಯಲು ಇರುವ ಮಾರ್ಗಸೂಚಿ, ಆದೇಶ ಪ್ರತಿ ಇನ್ನಿತರ ಮಾಹಿತಿ ಪಡೆಯುವಂತೆ ತಾಕೀತು ಮಾಡಿದರು. ಜಿಲ್ಲೆಯಲ್ಲಿ 1.53 ಲಕ್ಷ ಕುಟುಂಬಕ್ಕೆ ಕೇಂದ್ರ ಪಿಎಂ- ಕಿಸಾನ್ ಯೋಜನೆ ಲಾಭ ದೊರೆಯುತ್ತಿದೆ. ಬಾಕಿ ಇದ್ದವರಿಗೆ ಯಾಕೆ ದೊರೆತಿಲ್ಲವೆಂಬುದನ್ನು ಮುಂದಿನ ಸಭೆಯಲ್ಲಿ ಸಕಾರಣ ಸಮೇತ ತಿಳಿಸುವಂತೆ ಸೂಚಿಸಿದರು.
ಲೋಕೋಪಯೋಗಿ ಇಇ ಹೇಮಂತ ರಾಜ್ ಮಾತನಾಡಿ, ಕೆಕೆಆರ್ಡಿಬಿ ಅನುದಾನದಡಿ ವಿವಿಧ ರಸ್ತೆಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ ತಯಾರಿಸುತ್ತಿರುವುದಾಗಿ ತಿಳಿಸಿದರು. ಸಂಸದರು, ಕವಲೂರು ರಸ್ತೆಗಳ ಕಾಮಗಾರಿ ಯಾವಾಗ ಎಂದರು. ಈಗಾಗಲೇ ಎರಡು ರಸ್ತೆಗಳ ಅಭಿವೃದ್ಧಿಗೆ ಅನುಮೋದನೆ ದೊರೆತಿದೆ. ಒಂದು ರಸ್ತೆ ಕ್ರಿಯಾ ಯೋಜನೆ ಅನುಮೋದನೆಗೆ ಕಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು. ಎಂಎಲ್ಸಿ ಹೇಮಲತಾ, ರಸ್ತೆ ದುರಸ್ತಿ ಮಾಡುವಂತೆ ಪ್ರತಿಭಟಿಸಿದರೆ ಪ್ರಕರಣ ದಾಖಲಿಸಿದ್ದೀರಿ ಎಂದು ಕಿಡಿ ಕಾರಿದರು.
ಕೊಪ್ಪಳ ತಹಸೀಲ್ದಾರ್ ವಿಠ್ಠಲ ಚೌಗಲಾ ಮಾತನಾಡಿ, ಮಹಿಳಾ ಸಂದ ಸದಸ್ಯರು ಪ್ರತಿಭಟನೆ ಮಾಡಿದ್ದಾರೆ. ಆದರೆ, ಪ್ರತಿಭಟನೆಗೆ ಸಂಬಂಧಿಸಿದವರು ಕರ್ತವ್ಯಕ್ಕೆ ಅಡ್ಡಿ ಮಾಡಿದ್ದರಿಂದ ದೂರು ದಾಖಲಿಸಲಾಗಿದೆ ಎಂದು ಉತ್ತರಿಸಿದರು. ಗ್ರಾಮಸ್ಥರೆಲ್ಲ ಪ್ರತಿಭಟನೆ ಮಾಡಿದ್ದಾರೆ. ಅವರು ರಸ್ತೆ ಬೇಕೆಂದು ಕೇಳಿದ್ದಾರೆ. ಏರು ಧ್ವನಿಯಲ್ಲಿ ಮಾತನಾಡಿರಬಹುದು. ಹಾಗಂತ ಪ್ರಕರಣ ದಾಖಲಿಸುವುದು ಸರಿಯಲ್ಲ ತಕ್ಷಣ ವಾಪಸ್ ಪಡೆಯಿರಿ ಎಂದು ಹೇಮಲತಾ ಖಂಡಿಸಿದರು. ಸಭೆಯ ಅಜೆಂಡಾದಲ್ಲಿ ಈ ವಿಷಯವಿಲ್ಲ. ಆಮೇಲೆ ಮಾತನಾಡೋಣ ಎಂದು ಸಂಸದರು ತಡೆ ಹಾಕಿದರು.
ಪಶು ಸಂಗೋಪನೆ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ, ತೋಟಗಾರಿಕೆ ಸೇರಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ಜಿಲ್ಲಾ ಅರಣ್ಯಾಧಿಕಾರಿ ಕಾವ್ಯ ಚತುವೇದಿ, ಎಡಿಸಿ ಸಿದ್ರಾಮೇಶ್ವರ, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಇತರರಿದ್ದರು.