ಜಿಲ್ಲೆ

ಸದೃಢ ಆರೋಗ್ಯಕ್ಕೆ ಕ್ರೀಡೆ ಅವಶ್ಯ: ಶಾಸಕ ರಾಘವೇಂದ್ರ ಹಿಟ್ನಾಳ

ಕೊಪ್ಪಳ: ಸದಾ ಚಟುವಟಿಕೆಯಿಂದ ಇರುವುದು, ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ ಹೊಂದಬಹುದು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ, ಗವಿಸಿದ್ದೇಶ್ವರ ಪಿಯು ಕಾಲೇಜು ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ನಮ್ಮ ಜಿಲ್ಲೆಯಲ್ಲಿ ಅತ್ಯುತ್ತಮ ಕ್ರೀಡಾಪಟುಗಳಿದ್ದಾರೆ. ಅನೇಕ ಕ್ರೀಡೆಗಳಲ್ಲಿ ವಿಜಯ ಸಾಧಿಸಿದ್ದಾರೆ. ಪಠ್ಯದೊಂದಿಗೆ ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ. ಜಿಲ್ಲೆಗೆ ಕೀರ್ತಿ ತನ್ನಿ. ಸದಾ ಕ್ರೀಯಾಶೀಲರಾಗಿರಿ. ಸತತ ಪರಿಶ್ರಮದಿಂದ ಸಾಧನೆ ಸಾಧ್ಯ ಎಂದರು.

ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಇತ್ತೀಚೆಗೆ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿರುವುದು ಖುಷಿಯ ಸಂಗತಿ. ಇತ್ತೀಚೆಗೆ ನಡೆದ ಒಲಪಿಂಕ್​ ಕ್ರೀಡಾಕೂಟದಲ್ಲಿ ದೇಶದ ಅನೇಕ ಕ್ರೀಡಾಪಟುಗಳು ಉತ್ತಮ ಸಾಧನೆ ತೋರಿದ್ದಾರೆ. ಸಾಧನೆಗೆ ಯಾವುದೇ ಅಡೆತಡೆ ಇರುವುದಿಲ್ಲ. ಪ್ರತಿಭೆ ಯಾರ ಸ್ವತ್ತಲ್ಲ. ಸೂಕ್ತ ಅವಕಾಶ ದೊರೆತಾಗ ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಪ್ರಾಚಾರ್ಯ ರಾಜಶೇಖರ ಪಾಟೀಲ ಮಾತನಾಡಿದರು. ಪ್ರಾಚಾರ್ಯರ ಸಂದ ಜಿಲ್ಲಾಧ್ಯಕ್ಷ ಅನೀಲ ಕುಮಾರ್​ ಜಿ., ಜಿಲ್ಲಾ ಉಪನ್ಯಾಸಕರ ಸಂದ ಅಧ್ಯಕ್ಷ ಸೋಮಶೇಖರಗೌಡ, ಕಾರ್ಯಾಧ್ಯಕ್ಷ ಮಾರುತಿ ಲಕಮಾಪುರ, ಖಜಾಂಚಿ ಸಂಜಯ ಬಡಿಗೇರ, ಪ್ರಾಚಾರ್ಯರಾದ ಡಾ.ವಿರೇಶ ಕುಮಾರ, ಅಗಸ್ಟಿನ್​ ಎಸ್​., ಟಿ.ಸಿ.ಶಾಂತಪ್ಪ, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜ ಎ., ಪ್ರಮುಖರಾದ ಹನುಮಂತ ಹಳ್ಳಿಕೇರಿ, ಶರಣಪ್ಪ ಸಜ್ಜನ, ಡಾ.ಸಿದ್ದಲಿಂಗಪ್ಪ ಕೊಟ್ನೇಕಲ್​ ಇತರರಿದ್ದರು.