ಕೊಪ್ಪಳ: ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿರುವ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ಪಡೆಯುವಂತೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಸೋಮವಾರ ನಗರದ ತಹಸಿಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಬದಲಿಗೆ ಕೋಮುವಾದ ಸೃಷ್ಟಿಸುತ್ತಿದೆ. ಸಚಿವ ಈಶ್ವರಪ್ಪ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರದ ಮದದಲ್ಲಿ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ. ರಾಷ್ಟ್ರದ ತ್ರಿವರ್ಣ ಧ್ವಜದ ಬದಲು ಕೇಸರಿ ಧ್ವಜ ಹಾರಿಸುವುದಾಗಿ ಬಹಿರಂಗವಾಗಿ ಹೇಳುವ ಮೂಲಕ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಸಚಿವ ಈಶ್ವರಪ್ಪ ರಾಜೀನಾಮೆ ಪಡೆಯಬೇಕು. ದೇಶದ್ರೋಹ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಅಶಾಂತಿ ಸೃಷ್ಟಿಸುವ ಕೆಲಸವನ್ನು ಸರ್ಕಾರ ಕೈ ಬಿಡಬೇಕು. ಕೋಮುದ್ವೇಷ ಸೃಷ್ಟಿಸುವ ಕೃತ್ಯಗಳನ್ನು ಎಸಗಬಾರದು. ರಾಜ್ಯದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಒತ್ತಾಯಿಸಿದರು. ಮುಖಂಡರಾದ ಮಾನ್ವಿ ಪಾಷಾ, ಎಂ.ಕಾಟನ್ ಪಾಷಾ, ಸಲೀಂ ಅಳವಂಡಿ, ಗವಿಸಿದ್ದನಗೌಡ ಪಾಟೀಲ್, ಶ್ರೀನಿವಾಸ, ಮುತ್ತು ಕುಷ್ಟಗಿ, ಕಿಶೋರಿ ಬೂದನೂರು, ಜ್ಯೋತಿ ಗೊಂಡಬಾಳ, ಕೃಷ್ಣಾ ಇಟ್ಟಂಗಿ, ರವಿ ಕುರಗೋಡ ಇತರರಿದ್ದರು.