ಕೊಪ್ಪಳ: ಮಾನಸಿಕ ಒತ್ತಡದಲ್ಲಿರುವವರಿಗೆ ನಾವೆಲ್ಲ ನೈತಿಕ ಹಾಗೂ ಸಾಮಾಜಿಕ ಬೆಂಬಲ ನೀಡಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವೇಂದ್ರ ಪಂಡಿತ್ ಹೇಳಿದರು.
ನಗರದ ನಗರಕೇಂದ್ರ ಆಸ್ಪತ್ರೆ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ಒಂಟಿ ಭಾವನೆ, ಸದಾ ಬೇಜಾರು, ಇತರರಿಗೆ ಹೊರೆ ಎಂಬ ಭಾವನೆ, ಆತ್ಮಹತ್ಯೆ ಮಾರ್ಗಗಳ ಹುಡುಕಾಟ, ವ್ಯಸನ ಆತ್ಮಹತ್ಯೆ ದಾರಿ ಹಿಡಿಸುತ್ತದೆ. ಹತಾಶೆ, ಉದ್ವೇಗ, ಪ್ರವೃತ್ತಿ, ತೀವ್ರ ಅನಾರೋಗ್ಯ ಜೀವನದ ಒತ್ತಡಗಳು, ಮಾನಸಿಕ ಸಮಸ್ಯೆಗಳು, ನಿಕಟ ವ್ಯಕ್ತಿಯ ಆತ್ಮಹತ್ಯೆ, ಮದ್ಯಪಾನ, ಮಾದಕ ವಸ್ತುಗಳ ಬಳಕೆಯೂ ಕಾರಣವಾಗುತ್ತದೆ. ಯಾವುದೇ ಸಮಸ್ಯೆಗಳಿದ್ದರೂ ಆತ್ಮೀಯರೊಂದಿಗೆ ಹಂಚಿಕೊಳ್ಳಬೇಕು. ವೈದ್ಯರನ್ನು ಸಂಪರ್ಕಿಸಿ ಪರಿಹಾರ ಪಡೆಯಬಹುದು ಎಂದರು.
ಮನೋವೈದ್ಯ ಡಾ.ವಾದಿರಾಜ ಗೋರೆಬಾಳ ಮಾತನಾಡಿ, ಆತ್ಮಹತ್ಯೆ ಆಲೋಚನೆ ಕ್ಷಣಿಕ. ಸೂಕ್ತ ಚಿಕಿತ್ಸೆ ಮೂಲಕ ಅವರನ್ನು ಗುಣಪಡಿಸಬಹುದು. ಮಾನಸಿಕವಾಗಿ ಒತ್ತಡದಲ್ಲಿರುವವರನ್ನು ಒಂಟಿಯಾಗಿರಲು ಬಿಡಬಾರದು. ಮನೋ ವೈದ್ಯರ ಬಳಿಕರೆದೊಯ್ದು ಚಿಕಿತ್ಸೆ ಕೊಡಿಸಬೇಕು. ಮಾನಸಿಕ ತೊಂದರೆ, ಆತ್ಮಹತ್ಯೆ ಯೋಚನೆ ಬಂದಲ್ಲಿ ಸಹಾಯವಾಣಿ 14416ಕ್ಕೆ ಕರೆ ಮಾಡಿ ಸೂಕ್ತ ಮಾರ್ಗದರ್ಶನ ಪಡೆಯಬಹುದೆಂದು ತಿಳಿಸಿದರು.
ಕಾರ್ಯಕ್ರಮಕ್ಕು ಮುನ್ನ ನಗರದ ಹಳೇ ಜಿಲ್ಲಾಸ್ಪತ್ರೆಯಿಂದ ಆತ್ಮಹತ್ಯೆ ತಡೆ ಜಾಗೃತಿ ಜಾಥಾ ನಡೆಸಲಾಯಿತು. ಡಿಎಚ್‌ಒ ಡಾ.ಟಿ.ಲಿಂಗರಾಜು ಜಾಥಾಗೆ ಚಾಲನೆ ನೀಡಿದರು. ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಪ್ರಕಾಶ ವಿ., ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರವೀಂದ್ರನಾಥ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಶಶಿಧರ ಆಲೂರು, ತಾಲೂಕಾ ಆರೋಗ್ಯ ಅಧಿಕಾರಿ ಡಾ.ರಾಮಾಂಜನೇಯ ಇತರರಿದ್ದರು.