ಜಿಲ್ಲೆ

ರಾಮಾಯಣ ಅರಿತರೆ ರಾಮರಾಜ್ಯ ಸಾಧ್ಯ; ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಸಲಹೆ


ಕೊಪ್ಪಳ: ಮಹರ್ಷಿ ವಾಲ್ಮೀಕಿ ಹಾಗೂ ಅವರು ಬರೆದ ರಾಮಾಯಣದ ಬಗ್ಗೆ ಇಂದಿನ ಪೀಳಿಗೆ ಚೆನ್ನಾಗಿ ಅರಿತರೆ, ದೇಶ ರಾಮರಾಜ್ಯವಾಗುತ್ತದೆ ಎಂದು ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತದಿಂದ ಬುಧವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಾತ್ಮರ ಜೀವನ ಚರಿತ್ರೆಗಳನ್ನು ಯುವ ಪೀಳಿಗೆಗೆ ತಿಳಿಸಬೇಕು. ರಾಮಾಯಣದ ಅಂಶಗಳು ಯಾವಾಗಲೂ ಪ್ರಸ್ತುತ. ಸಮಾಜದಲ್ಲಿ ಹೇಗೆ ಬದುಕಬೇಕೆಂಬುದನ್ನು ಈ ಕಾವ್ಯ ಕಲಿಸುತ್ತದೆ. ಸರ್ವ ಸಮುದಾಯಗಳೊಂದಿಗೆ ಹೊಂದಾಣಿಕೆಯಿಂದ ಜೀವನ ನಡೆಸುವುದೇ ಎಲ್ಲ ದಾರ್ಶನಿಕರ ಮಹದಾಸೆಯಾಗಿತ್ತು. ನಗರದಲ್ಲಿ ವಾಲ್ಮೀಕಿ ಭವನ ಕಾಮಗಾರಿ ಶೀಘ್ರ ಪೂರ್ಣಗೊಳಿಸಲಾಗುವುದು ಎಂದರು.

ಸಹಾಯಕ ಪ್ರಾಧ್ಯಾಪಕ ನಾಗೇಂದ್ರಪ್ಪ ಉಪನ್ಯಾಸ ನೀಡಿದರು. ಸಂಸದ ಸಂಗಣ್ಣ ಕರಡಿ, ನಗರಸಭೆ ಅಧ್ಯಕ್ಷೆ ಲತಾ ಗವಿಸಿದ್ದಪ್ಪ ಚಿನ್ನೂರು, ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್, ಎಸ್ಪಿ ಟಿ.ಶ್ರೀಧರ್, ಎಡಿಸಿ ಎಂ.ಪಿ.ಮಾರುತಿ, ಸಹಾಯಕ ಆಯುಕ್ತ ನಾರಾಯಣರಡ್ಡಿ ಕನಕರಡ್ಡಿ, ಜಿಪಂ ಉಪ ಕಾರ್ಯದರ್ಶಿ ಶರಣಬಸವರಾಜ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನವೀನ್ ಶಿಂತ್ರೆ, ಸಮುದಾಯ ಮುಖಂಡರಾದ ಸುರೇಶ ಡೊಣ್ಣಿ, ಶರಣಪ್ಪ ನಾಯಕ ಇತರರಿದ್ದರು.