ಕೊಪ್ಪಳ: ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಮಾಜಿ ಗುತ್ತಿಗೆ ನೌಕರ ಕಳಪ್ಪ ಬಂಡಿ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಕೊಟ್ಯಂತರ ರೂ. ಮೌಲ್ಯದ ಆಸ್ತಿಕಂಡು ಅಧಿಕಾರಿಗಳೇ ಬೆರಗಾಗಿದ್ದಾರೆ.
ಅಪಾರ್ಟಮೆಂಟ್ ಸೇರಿ 24 ಮನೆ, 20 ನಿವೇಶನ, 350 ಗ್ರಾಂ ಚಿನ್ನ ಎರಡು ಕಾರು, ಎರಡು ಬೈಕ್, 30 ಎಕರೆ ಜಮೀನು ಹಾಗೂ 20 ಎಕರೆ ಜಮೀನಿನ ಖರೀದಿ ಕರಾರು ಪತ್ರದ ದಾಖಲೆ ಲಭ್ಯವಾಗಿವೆ. ಕೊಪ್ಪಳದ ಪ್ರಗತಿ ನಗರದ ಮನೆ ಹಾಗೂ ಕೆಆರ್ಐಡಿಎಲ್ ಕಚೇರಿಯಲ್ಲಿ ದಾಖಲೆ ಪರಿಶೀಲನೆ ನಡೆಸಲಾಯಿತು. 20 ವರ್ಷದಿಂದ ಕಳಕಪ್ಪ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ. ಇಲಾಖೆಯಲ್ಲಿ 72 ಕೋಟಿ ರೂ. ಅವ್ಯವಹಾರ ನಡೆದ ಪ್ರಕರಣದಲ್ಲಿ ಕೆಲಸದಿಂದ ವಜಾಗೊಂಡಿದ್ದಾನೆ.
ಅಕ್ರಮ ಸಂಬಂಧ ಕೆಆರ್ಐಡಿಎಲ್ ಅಧಿಕಾರಿಗಳೇ ನೀಡಿದ ದೂರಿನ ಭಾಗವಾಗಿ ಲೋಕಾಯುಕ್ತ ದಾಳಿ ನಡೆದಿದೆ. ಝಡ್. ಎಂ.ಚಿಂಚೋಳಿಕರ್ ಇಇ ಆಗಿದ್ದಾಗ, ಸುಮಾರು ಒಂದು ನೂರು ಕೋಟಿ ರೂ. ಬೋಗಸ್ ಬಿಲ್ ಎತ್ತುವಳಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇಲಾಖೆ ತನಖೆ ನಡೆದು ಆರೋಪ ಸಾಬೀತಾಗಿದ್ದು, ಆಗಿನ ಇಇ ಝಡ್.ಎಂ.ಚಿಂಚೋಳಿಕರ್, ಹೊರ ಗುತ್ತಿಗೆ ನೌಕರ ಕಳಕಪ್ಪ ಬಂಡಿ ವಜಾಗೊಂಡಿದ್ದಾರೆ. ಇವರಿಬ್ಬರು ಹಾಗೂ ಒಬ್ಬ ಗುತ್ತಿಗೆದಾರನ ವಿರುದ್ಧ ಲೋಕಾಯುಕ್ತರಿಗೆ ದೂರು ದಾಖಲಾಗಿದೆ.
ಲೋಕಾಯುಕ್ತ ಡಿವೈಎಸ್ಪಿ ವಸಂತಕುಮಾರ ನೇತೃತ್ವದಲ್ಲಿ ಪಿಐ ಸುನೀಲ್ ಮ್ಯಾಗಿನಮನಿ, ಚಂದ್ರಪ್ಪ, ವಿಜಯಕುಮಾರ, ನಾಗರತ್ನ, ಶೈಲಾ ಪಾಟೇಕರ್ ಇತರ ಸಿಬ್ಬಂದಿ ಇದ್ದರು.