ಕೊಪ್ಪಳ: ಕವಲೂರು ಗ್ರಾಮದಲ್ಲಿ ರಸ್ತೆ ಮಾಡುವಂತೆ ಆಗ್ರಹಿಸಿ ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ದೇವೆ. ಆದರೆ, ತಹಸೀಲ್ದಾರ್ ನಮ್ಮ ಗ್ರಾಮದ ಅಮಾಯಕ ಪುರುಷರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಕೂಡಲೇ ಕೇಸ್ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಗ್ರಾಮದ ರತ್ನಾ ಉಟಗನೂರು ತಿಳಿಸಿದರು.
ಮಹಿಳಾ ಸಂದ ಸದಸ್ಯರು ಪ್ರತಿಭಟನೆ ಮಾಡಿದಾಗ ಮನವಿ ಸ್ವೀಕರಿಸಿದ ಅಧಿಕಾರಿಗಳು ಯಾವಾಗ ರಸ್ತೆ ಮಾಡುತ್ತಾರೆ ಎಂದು ಉತ್ತರ ನೀಡಿಲ್ಲ. ಅದಕ್ಕೆ ಆಕ್ರೋಶಗೊಂಡ ಪುರುಷರು ಅಧಿಕಾರಿಗಳ ವಾಹನ ಅಡ್ಡಗಟ್ಟಿರುವುದು ನಿಜ. ಆದರೆ, ಹಲ್ಲೆ ಮಾಡಿಲ್ಲ. ನ್ಯಾಯಯುತವಾಗಿ ನಮ್ಮ ಹಕ್ಕು ಕೇಳುವುದು ತಪ್ಪಾ ? ಒಂದೊಮ್ಮೆ ಕಾನೂನು ಉಲ್ಲಂಘಿಸಿದ್ದರೆ ಸ್ಥಳದಲ್ಲಿದ್ದ ಪೊಲೀಸರು ವಶಕ್ಕೆ ಪಡೆಯಬಹುದಿತ್ತು. ಅಹಿತಕರ ಘಟನೆ ನಡೆದಿಲ್ಲ. ಸದ್ಯ ಬಿತ್ತನೆ ಕಾರ್ಯ ನಡೆದಿದೆ. ಗ್ರಾಮಸ್ಥರೆಲ್ಲ ರೈತರು. ಬೇರೆ ಉದ್ಯೋಗ ಅವಲಂಬಿಸಿಲ್ಲ. ದುರುದ್ದೇಶದಿಂದ ಪ್ರಕರಣ ದಾಖಲಿಸಿ ಅವರು ಊರು ಬಿಡುವಂತೆ ಮಾಡಿದ್ದಾರೆ. ಅಮಾಯಕರ ಮೇಲೆ ಅಧಿಕಾರಿಗಳು ದರ್ಪ ತೋರುವುದು ಸರಿಯಲ್ಲವೆಂದು ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.
ಒಂದು ದಿನ ಪ್ರತಿಭಟಿಸಿದ್ದಕ್ಕೆ ಅಧಿಕಾರಿಗಳು ಪ್ರರಕರಣ ದಾಖಲಿಸಿದ್ದಾರೆ. ಇಷ್ಟು ವರ್ಷ ರಸ್ತೆಯಲ್ಲಿ ಬಿದ್ದು ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಕೈಕಾಲು ಮುರಿದುಕೊಂಡಿದ್ದಾರೆ. ನಾವು ಸಾಕಷ್ಟು ನೋವು ಅನುಭವಿಸಿದ್ದು, ಯಾರ ವಿರುದ್ಧ ಪ್ರಕರಣ ದಾಖಲಿಸಬೇಕು ? ತಕ್ಷಣ ಪ್ರಕರಣ ವಾಪಸ್ ಪಡೆಯಲಿ. ಈ ಬಗ್ಗೆ ಡಿಸಿ ಹಾಗೂ ಎಸ್ಪಿಗೆ ಮನವಿ ಸಲ್ಲಿಸುತ್ತೇವೆ. ಅಧಿಕಾರಿಗಳು ದರ್ಪ ಮುಂದುವರೆಸಿದರೆ ಸುತ್ತಲಿನ ಗ್ರಾಮದ ಎಲ್ಲ ಮಹಿಳೆಯರು ಹೋರಾಟ ತೀವ್ರಗೊಳಿಸುತ್ತೇವೆ. ಕಾನೂನು ಹೋರಾಟವನ್ನೂ ಮಾಡುತ್ತೇವೆಂದು ತಿಳಿಸಿದರು.
ಗ್ರಾಮಸ್ಥರಾದ ರೇಣುಕಾ ಬೆಟಗೇರಿ, ಗಂಗಮ್ಮ ಸಿಂದೋಗಿ, ಶೋಭಾ ಬೀಳಗಿ, ಫಾತಿಮಾ ದೊಡ್ಮನಿ ಇತರರು ಇದ್ದರು.