ಜಿಲ್ಲೆ

ಅಶ್ಲೀಲ ಗೋಡೆ ಬರಹ ಕ್ರಮ ಕೈಗೊಳ್ಳದ ಪೊಲೀಸರು

ರವೀಂದ್ರ ರಡ್ಡಿ

ಕೊಪ್ಪಳ: ಕನಕಗಿರಿ ಪಟ್ಟಣದಲ್ಲಿ ಕಳೆದ ಒಂದೂವರೆ ವರದಷದಿಂದ ಶಾಲಾ ವಿದ್ಯಾರ್ಥಿನಿಯರ ವಿರುದ್ಧ ಕಿಡಿಗೇಡಿಗಳು ಅಶ್ಲೀಲವಾಗಿ ಬರೆದು ಮಾನ ಹರಾಜು ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದರೂ ಪೊಲೀಸರು ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

ಪಟ್ಟಣದ ಶಾಲೆ ಗೋಡೆಗಳು, ಧಾರ್ಮಿಕ ಕೇಂದ್ರ ಸೇರಿ ವಿವಿಧೆಡೆ ಕೆಲ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ಅಶ್ಲೀಲವಾಗಿ ಬರೆಯಲಾಗುತ್ತಿದೆ‌. ಇದರಿಂದ ವಿದ್ಯಾರ್ಥಿಗಳು ಹಾಗೂ ಪಾಲಕರು ಮಾನಸಿಕ ಕಿರುಕುಳ ಅನುಭವಿಸುತ್ತಿದ್ದಾರೆ. ನೊಂದ ಪಾಲಕರು ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಅವಲೊತ್ತುಕೊಳ್ಳುತ್ತಿದ್ದಾರೆ. ಶಾಲಾ ಶಿಕ್ಷಕರು, ಸಾರ್ವಜನಿಕರು ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ದೂರು ದಾಖಲಿಸಿದರೂ ಕೃತ್ಯ ಹೆಚ್ಚಾಗುತ್ತಿದೆ ಹೊರತು ಕಡಿವಾಣ ಬೀಳುತ್ತಿಲ್ಲ. ಮುಂದುವರೆದು ಇನ್ಸ್ಟಾಗ್ರಾಂ ನಲ್ಲಿ ನಕಲಿ ಐಡಿ ರಚಿಸಿ ಅದರಿಂದ ಬಾಲಕಿಯರ ಪಾಲಕರಿಗೆ ಮತ್ತೊಮ್ಮೆ ಅಶ್ಲೀಲ ಸಂದೇಶ ಕಳಿಸಿದ್ದಾರೆ. ಈ ಬಗ್ಗೆಯೂ ಮತ್ತೊಂದು ಪ್ರಕರಣ ದಾಖಲಾಗಿದೆ. ಪಾಲಕರು ಎಸ್ಪಿಗೆ ಮನವಿ ಸಲ್ಲಿಸಿ ಪ್ರಕರಣದಿಂದ ಮುಕ್ತಿ ನೀಡಲು ಅಳಲು ತೋಡಿಕೊಂಡಿದ್ದಾರೆ. ಇ ಬಗ್ಗೆ ತನಿಖಾ ತಂಡ ರಚಿಸಿರುವುದಾಗಿ ಹೇಳುವ ಪೊಲೀಸರು ಕಿಡಿಗೇಡಿಗಳನ್ನು ಹಿಡಿದಿಲ್ಲ.

ದಿನ ಕಳೆದಂತೆ ಅಶ್ಲೀಲ ಬರವಣಿಗೆ ಹೆಚ್ಚುತ್ತಿದೆ. ಬೆಳಗಾಗುವುದರೊಳಗೆ ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ಸಂದೇಶ ಕಾಣಿಸಿಕೊಳ್ಳುತ್ತಿವೆ. ಇಂದು (ಶನಿವಾರ) ಶಾಲೆ ಗೋಡೆ ಮೇಲೆ ಎಂಟು ವಿದ್ಯಾರ್ಥಿನಿಯರ ಬಗ್ಗೆ ಆಶ್ಲೀಲವಾಗಿ ಬರೆದಿದ್ದಾರೆ. ದೊಡ್ಡ ದರೋಡೆ ಪ್ರಕರಣಗಳಲ್ಲಿ ವಾರದಲ್ಲಿ ಆರೋಪಿಗಳನ್ನು ಪತ್ತೆ ಮಾಡುವ ಪೊಲೀಸರು ಈ ಪ್ರಕರಣದಲ್ಲಿ ವರ್ಷ ಕಳೆದರೂ ಕ್ರಮ ಕೈಗೊಳ್ಳದಿರುವುದು ಯಾಕೆಂಬ ಪ್ರಶ್ನೆ ಮೂಡಿದೆ.