ಜಿಲ್ಲೆ

ಗವಿಮಠದಲ್ಲಿ ಮಹಾದಾಸೋಹ, ಲಕ್ಷಾಂತರ ಭಕ್ತರಿಂದ ಪ್ರಸಾದ ಸೇವನೆ, ಮಾದಲಿ, ಹಾಲು-ತುಪ್ಪ, 18 ಲಕ್ಷ ಮಿರ್ಚಿ ತಯಾರಿಕೆ

ಕೊಪ್ಪಳ: ದಾಸೋಹ ಸೇವೆಯಿಂದಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ಗವಿಸಿದ್ದೇಶ್ವರ ಜಾತ್ರೆಯಲ್ಲಿ ನಿತ್ಯವೂ ಲಕ್ಷಾಂತರ ಭಕ್ತರು ಪ್ರಸಾದ ಸೇವಿಸುತ್ತಿದ್ದಾರೆ.

ದಕ್ಷಿಣ ಭಾರತದ ಕುಂಭಮೇಳವೆಂದೇ ಖ್ಯಾತಿ ಪಡೆದಿರುವ ಗವಿಸಿದ್ಧೇಶ್ವರ ಜಾತ್ರೆಗೆ ವರ್ಷದಿಂದ ವರ್ಷಕ್ಕೆ ಭಕ್ತಸಾಗರ ಹೆಚ್ಚುತ್ತಿದೆ. ಜಾತ್ರೆಯ ಎರಡನೇ ದಿನವಾದ ಸೋಮವಾರವೂ ಲಕ್ಷಕ್ಕೂ ಅಧಿಕ ಭಕ್ತರು ದಾಸೋಹ ಮಂಟಪದಲ್ಲಿ ಕಂಡುಬಂದರು. ರಥೋತ್ಸವ ದಿನದಿಂದ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ.

90 ಕ್ವಿಂಟಾಲ್ ಅಕ್ಕಿ ಬಳಕೆ:  ನಿತ್ಯ ಬೆಳಗ್ಗೆ 7 ಗಂಟೆಯಿಂದ ತಡರಾತ್ರಿ 2 ಗಂಟೆವರೆಗೂ ಪ್ರಸಾದ ವಿತರಣೆ ನಡೆಯುತ್ತಿದೆ. ಉತ್ತರ ಕರ್ನಾಟಕ ಶೈಲಿಯ ರೊಟ್ಟಿ, ಚಪಾತಿ, ಪಲ್ಲೆ, ಮಾದಲಿ, ಹಾಲು, ತುಪ್ಪ, ಅನ್ನಾ, ಸಾಂಬಾರ್, ಚಟ್ನಿಪುಡಿ, ಮಜ್ಜಿಗೆ ಇವುಗಳ ಜತೆಗೆ ಬಿಸಿ ಬಿಸಿಯಾದ ಮಿರ್ಚಿ ವಿತರಿಲಾಯಿತು. ನಿತ್ಯ ದಾಸೋಹಕ್ಕೆ ಸುಮಾರು 90 ಕ್ವಿಂಟಾಲ್ ಅಕ್ಕಿ, 30 ಕ್ವಿಂಟಾಲ್ ಮಾದಲಿ, 20 ಕ್ವಿಂಟಾಲ್ ಇನ್ನಿತರ ಸಹಿ ಪದಾರ್ಥ, 3 ಲಕ್ಷ ರೊಟ್ಟಿ, ತಲಾ 5 ಕೊಪ್ಪರಕಿ ಬೇಳೆ, ಸಾಂಬಾರು ಖರ್ಚಾಗುತ್ತಿದೆ.

18 ಲಕ್ಷ ಮಿರ್ಚಿ ತಯಾರಿಕೆ :  ಭಕ್ತರಿಗೆ ಕಳೆದ 5 ವರ್ಷಗಳಿಂದಲೂ ಮಹಾದಾಸೋಹದಲ್ಲಿ ಮಿರ್ಚಿಗಳನ್ನು ನೀಡಲಾಗುತ್ತಿದೆ. ಮೊದಲಿಗೆ ಕೊಪ್ಪಳದ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಗೆಳೆಯರ ಬಳಗವು ಸೇವೆ ಸಲ್ಲಿಸುತ್ತಿತ್ತು. ಈ ಬಾರಿ ಮಠದಿಂದಲೇ ಮಿರ್ಚಿ ಸೇವೆ ಮಾಡಲಾಯಿತು. 18 ಕ್ವಿಂಟಾಲ್ ಕಡಲೆ ಬೇಳೆ ಹಿಟ್ಟು, 15 ಕ್ವಿಂಟಾಲ್ ಹಸಿಮೆಣಸಿನಕಾಯಿ, 10 ಬ್ಯಾರಲ್ ಎಣ್ಣೆ ಅಲ್ಲದೇ ಜೀರಗಿ, ಅಡುಗೆ ಸೋಡಾ, ಇನ್ನಿತರ ವಸ್ತುಗಳನ್ನು ಬಳಸಿಕೊಂಡು ಬೆಳಗ್ಗೆಯಿಂದಲೇ 300 ಕ್ಕಿಂತಲೂ ಅಧಿಕ ಬಾಣಸಿಗರು, ಸ್ವಯಂ ಸೇವಕರು ಬಸಿ ಬಿಸಿ ಮಿರ್ಚಿ ತಯಾರಿಸಿದರು. ಸೋಮವಾರವಿಡೀ ಭಕ್ತರಿಗೆ ಸುಮಾರು 18 ಲಕ್ಷಕ್ಕಿಂತಲೂ ಹೆಚ್ಚು ಮಿರ್ಚಿ ತಯಾರಿಸಲಾಯಿತು.

ಸ್ವಚ್ಛತೆಗೆ ಹೆಚ್ಚಿನ ಆದ್ಯತೆ: ಜಾತ್ರೆಯಲ್ಲಿ ನೂರಾರು ಮಿಠಾಯಿ, ಗೋಬಿಮಂಚೂರಿ, ಪಾನಿಪುರರಿ ಅಂಗಡಿಗಳು, ಇಡ್ಲಿ ಸೆಂಟರ್‌ಗಳಿವೆ. ಲಕ್ಷಾಂತರ ಜನ ನಿತ್ಯ ಜಾತ್ರೆಯಲ್ಲಿ ಓಡಾಡುತ್ತ ಆಹಾರ ಸೇವಿಸುತ್ತಾರೆ. ಹೀಗಾಗಿ ಈ ಅಂಗಡಿಯಲ್ಲಿ ಕೆಲಸ ಮಾಡುವವರಿಗೆ ತಲೆಗವಚ ಹಾಗೂ ಕೈಗವಚ ನೀಡಲಾಗುತ್ತಿದೆ. ಅನುರಾಮ ಸಾಮಾಜಿಕ ಹಾಗೂ ಶೈಕ್ಷಣಿಕ ಸಂಸ್ಥೆಯಿಂದ ಅವುಗಳನ್ನು ವಿತರಿಸಲಾಗುತ್ತಿದೆ. ಲಕ್ಷಾಂತರ ಭಕ್ತರು ಪ್ರಸಾದ ಸೇವಿಸುವುದರಿಂದ ಸಾಕಷ್ಟು ತ್ಯಾಜ್ಯ ಸೃಷ್ಟಿಯಾಗುತ್ತದೆ. ಆದರೆ, ಅದನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲಾಗುತ್ತಿದೆ. ರಸ್ತೆಗಳಿಗೆ ಆಗಾಗ ನೀರು ಹಾಕುತ್ತಿದ್ದು, ಧೂಳು ನಿಯಂತ್ರಿಸುವ ಕಾರ್ಯವೂ ನಡೆದಿದೆ.

ತಲೆ ಮೇಲೆ ಪ್ರಸಾದ ಹೊತ್ತು ತಂದ ಭಕ್ತರು :  ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ ಗ್ರಾಮದ ಭಕ್ತರು ಸೋಮವಾರ ಶ್ರೀ ಮಠಕ್ಕೆಂದು ತಯಾರಿಸಿದ ಪ್ರಸಾದವನ್ನು ತಲೆ ಮೇಲೆ ತಂದರು. ಸುಮಾರು 8-10 ಕಿ.ಮೀ. ದೂರದಿಂದ ಬುಟ್ಟಿಯಲ್ಲಿ ಸಿಹಿ ಪದಾರ್ಥ, ರೊಟ್ಟಿ ಸೇರಿ ಇತರ ತಿನಿಸಿಗಳನ್ನು ತಂದು ಮಠಕ್ಕೆ ಅರ್ಪಿಸಿ ಶ್ರೀಗಳ ಆಶೀರ್ವಾದ ಪಡೆದರು.