ಗಂಗಾವತಿ (ಕೊಪ್ಪಳ): ಬಸ್ ಅಪಘಾತದಲ್ಲಿ ಮೃತಪಟ್ಟ ಕುಟಂಬಕ್ಕೆ ಸರಿಯಾದ ರೀತಿಯಲ್ಲಿ ಪರಿಹಾರ ನೀಡದ ಕಾರಣ ನ್ಯಾಯಾಲಯದ ನಿರ್ದೇಶನದಂತೆ ಗಂಗಾವತಿ ಬಸ್ ನಿಲ್ದಾಣದಲ್ಲಿದ್ದ ಸಾರಿಗೆ ಬಸ್ ಜಪ್ತಿ ಮಾಡಲಾಗಿದೆ.
2018 ರಲ್ಲಿ ಸಿಂಧನೂರು ತಾಲೂಕಿನ ಬೂದಿವಾಳ ಕ್ಯಾಂಪಿನ ನವೀನ್ ಕುಮಾರ ಎನ್ನುವರು ಗಂಗಾವತಿ ಕಂಪ್ಲಿ ರಸ್ತೆ ಬಳಿ ಕುಷ್ಟಗಿ ಡಿಪೋದ ಸಾರಿಗೆ ಬಸ್ ನಿಂದ ಸಂಭವಿಸಿದ ಅಪಘಾತದಿಂದ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಸ್ವಪ್ನಾ ನಗರ ಪೊಲೀಸ್ ಠಾಣೆಗೆ ದೂರು ನೀಡಿ 33.42 ಲಕ್ಷ ಪರಿಹಾರ ಕಲ್ಪಿಸಬೇಕೆಂದು ಕೋರಿದ್ದರು. ನ್ಯಾಯಾಲಯವೂ ಪರಿಹಾರ ನೀಡಲು ಸೂಚಿಸಿತ್ತು. ಸಾರಿಗೆ ಅಧಿಕಾರಿಗಳು ಪೂರ್ಣ ಮೊತ್ತ ನೀಡದೆ ಕೇವಲ 10 ಲಕ್ಷ ರೂ. ನೀಡಿ ಕೈ ತೊಳೆದು ಕೊಂಡಿದ್ದಾರೆನ್ನಲಾಗಿದೆ.
ಇದರಿಂದ ತಮಗೆ ಅನ್ಯಾಯವಾಗಿದೆ ಎಂದು ಗಂಗಾವತಿ ಜೆಎಂಎಫ್ ಸಿ ನ್ಯಾಯಲಯಕ್ಕೆ ಸ್ವಪ್ನಾ ಮೊರೆ ಹೋಗಿದ್ದರು. ಬಾಕಿ 23 ಲಕ್ಷ ರೂ. ಕೊಡಿಸುವಂತೆ ಕೋರಿದ್ದರು. ಪರಿಹಾರಕ್ಕೆ ಸೂಚಿಸಿದರೂ ನೀಡದ ಕಾರಣ ಬಸ್ ಜಪ್ತಿ ಮಾಡುವಂತೆ ನ್ಯಾಯಾಲಯ ಸೂಚಿಸಿದೆ. ಈ ಬೆನ್ನಲ್ಲೇ ಬಸ್ ನಿಲ್ದಾಣದಲ್ಲಿದ್ದ ಬಸ್ ಜಪ್ತಿ ಮಾಡಿದ ಪೊಲೀಸರು ನಗರಠಾಣೆಗೆ ಕೊಂಡೊಯ್ದಿದ್ದಾರೆ.
ಈ ಬಗ್ಗೆ ಕೇಂದ್ರ ಕಚೇರಿಗೆ ವರದಿ ಮಾಡಿದ್ದೇವೆ. ಅಲ್ಲಿಂದ ಬರುವ ಸೂಚನೆ ಅನುಸಾರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಕೆಕೆಆರ್ಟಿಸಿ ನಿಗಮ ಜಿಲ್ಲಾ ಮಟ್ಟದ ಅಧಿಕಾರಿಗಳು ವಿಜಯವಾಣಿಗೆ ತಿಳಿಸಿದ್ದಾರೆ.