ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಭಿತ್ತಿಪತ್ರಗಳನ್ನು ಕೊಪ್ಪಳದಲ್ಲಿ ಬುಧವಾರ ಎಡಿಸಿ ಎಂ.ಪಿ.ಮಾರುತಿ ಬಿಡುಗಡೆ ಮಾಡಿದರು. 
ಜಿಲ್ಲೆ

ಪೋಲಿಯೋ ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯ

ಕೊಪ್ಪಳ: ಜಿಲ್ಲಾದ್ಯಂತ ಫೆ.27ರಿಂದ ಮಾ.2ರವರೆಗೆ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, ಅಧಿಕಾರಿಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಎಂದು ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಲಸಿಕಾ ಕಾರ್ಯಕ್ರಮದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪೋಲಿಯೋ ನಿರ್ಮೂಲನೆಗೆ ಎಲ್ಲರ ಸಹಕಾರ ಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಇತರ ಇಲಾಖೆ ಅಧಿಕಾರಿಗಳು ಸಹಕಾರ ನೀಡಿ. ಐದು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿ. ಗುಳೆ, ವಲಸೆ ಹೋದ ಕುಟುಂಬದವರನ್ನು ಸಂಪರ್ಕಿಸಿ ಮಕ್ಕಳಿಗೆ ಲಸಿಕೆ ಸಿಗುವಂತೆ ನೋಡಿಕೊಳ್ಳಿ. ಕೈಗಾರಿಕಾ ಪ್ರದೇಶ, ರೈಲ್ವೆ ಕಾಮಗಾರಿ, ಇತರ ದೊಡ್ಡ ದೊಡ್ಡ ಕಾಮಗಾರಿ ಪ್ರದೇಶದಲ್ಲಿನ ಕಾರ್ಮಿಕರ ಮಕ್ಕಳು, ಅಲೆಮಾರಿ ಜನಾಂಗದ ಮಕ್ಕಳಿಗೂ ಲಸಿಕೆ ಹಾಕಿ. ಪೋಲಿಯೋ ಮಾರಕ ರೋಗವಾಗಿದ್ದು, ಐದು ವರ್ಷದೊಳಗಿನ ಯಾವ ಮಗುವೂ ಲಸಿಕೆಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಿ. ಗ್ರಾಮೀಣ ಭಾಗದಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ಯೋಜನೆ ರೂಪಿಸಿಕೊಂಡು ಲಸಿಕೆ ಹಾಕಿ. ಅಗತ್ಯವಿದ್ದಲ್ಲಿ ಆಯುಷ್, ಕಿಮ್ಸ್, ನರ್ಸಿಂಗ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಿ. ಸಕ್ರಿಯ ಖಾಸಗಿ ಸಂಘಟನೆಗಳ ಸಹಾಯ ಪಡೆದುಕೊಳ್ಳಿ. ಲಸಿಕಾ ಕಾರ್ಯಕ್ರಮ ಕುರಿತು ಜಾಗೃತಿ ಮೂಡಿಸಿ ಎಂದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ ಮಾತನಾಡಿ, ಜಿಲ್ಲೆಯಲ್ಲಿ ಐದು ವರ್ಷದೊಳಗಿನ 1,79,292 ಮಕ್ಕಳಿಗೆ ಲಸಿಕೆ ನೀಡುವ ಗುರಿ ಇದೆ. ಫೆ.27 ರಂದು 890 ಬೂತ್‌ಗಳಲ್ಲಿ ಲಸಿಕೆ ನೀಡಲಾಗುವುದು. ಉಳಿದ ಮೂರು ದಿನಗಳು ಮನೆ ಮನೆಗೆ ತೆರಳಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ 19 ಮೊಬೈಲ್ ಟೀಂಗಳ ಮೂಲಕ ಲಸಿಕೆ ನೀಡುತ್ತೇವೆ. ಪ್ರತಿ ಬೂತ್‌ಗೆ 183 ಮಕ್ಕಳ ಗುರಿ ನೀಡಲಾಗಿದೆ. 1780 ಸಿಬ್ಬಂದಿ, ಟ್ರಾನ್ಸಿಟ್ ಟೀಂಗಳಲ್ಲಿ 94, ಮೊಬೈಲ್ ಟೀಂಗಳಲ್ಲಿ 38 ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.

ಡಿಎಸ್‌ಒ ಡಾ.ನಂದಕುಮಾರ, ಆಯುಷ್ ಅಧಿಕಾರಿ ಡಾ.ಬಸವರಾಜ ಕುಂಬಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಅಕ್ಕಮಹಾದೇವಿ ಇತರರಿದ್ದರು.