ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೊಪ್ಪಳ ತಾಲೂಕಿನ ಚಿಲಕಮುಖಿ ಗ್ರಾಮದಲ್ಲಿ ಸೋಮವಾರ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಸಸಿ ನೆಟ್ಟರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಆನಂದ, ನರೇಗಾ ಸಹಾಯಕ ನಿರ್ದೇಶಕ ಸೌಮ್ಯ, ತಾಲೂಕು ಯೋಜನಾಧಿಕಾರಿ ರಾಜೇಸಾಬ್ ನದಾಫ್, ಎಸ್‌ಬಿಎಂ ನೋಡಲ್ ಅಧಿಕಾರಿ ಜ್ಯೋತಿ ರಡ್ಡಿ ಇದ್ದರು. 
ಜಿಲ್ಲೆ

ಪ್ರಾಕೃತಿಕ ಸಂಪತ್ತು ನಶಿಸಿದರೆ ಬದುಕು ಅಂತ್ಯ

ಕೊಪ್ಪಳ: ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರವಹಿಸುತ್ತದೆ. ಗ್ರಾಮದ ಸುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ತಿಳಿಸಿದರು.

ತಾಲೂಕಿನ ಚಿಲಕಮುಖಿ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸೋಮವಾರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಮೃದ್ಧ ಪರಿಸರ ಎಲ್ಲ ಜೀವಿಗಳ ಬದುಕಿಗೆ ಅವಕಾಶ ನೀಡಲಿದೆ. ನಮ್ಮ ಅಭಿವೃದ್ಧಿಗಾಗಿ ನಮಗರಿವಿಲ್ಲದೇ ಪರಿಸರ ಹಾಳು ಮಾಡುತ್ತಿದ್ದೇವೆ. ಇದನ್ನು ತಡೆಗಟ್ಟಬೇಕಿದೆ. ಎಲ್ಲರಲ್ಲೂ ಪರಿಸರ ಕಾಳಜಿ ಮೂಡಿಸಲು ಜೂ.5ರಂದು ಪರಿಸರ ದಿನ ಆಚರಿಸಲಾಗುತ್ತದೆ. ಮಕ್ಕಳಿಗೆ ಪರಿಸರದ ಬಗ್ಗೆ ತಿಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಎಲ್ಲರೂ ಸಾಧ್ಯವಾದಷ್ಟು ಸಸಿಗಳನ್ನು ಬೆಳಸುವಂತೆ ಸಲಹೆ ನೀಡಿದರು.

ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ವಿವಿಧ ಸಸಿಗಳನ್ನು ನೆಡಲಾಯಿತು. ಪರಿಸರ ದಿನದ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಆನಂದ, ನರೇಗಾ ಸಹಾಯಕ ನಿರ್ದೇಶಕ ಸೌಮ್ಯ, ತಾಲೂಕು ಯೋಜನಾಧಿಕಾರಿ ರಾಜೇಸಾಬ್ ನದಾಫ್, ಎಸ್‌ಬಿಎಂ ನೋಡಲ್ ಅಧಿಕಾರಿ ಜ್ಯೋತಿ ರಡ್ಡಿ, ಗ್ರಾಮಸ್ಥ ಮಲ್ಲೇಶಪ್ಪ ಗುಮಗೇರಿ, ಸಾಮಾಜಿಕ ವಲಯ ಅರಣ್ಯಧಿಕಾರಿ ಗುರುನಗೌಡ ಪಾಟೀಲ್, ಉಪ ವಲಯ ಅರಣ್ಯಧಿಕಾರಿ ಅಬ್ದು ಸಮಿ, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ತಾಲೂಕು ಸಂಯೋಜಕ ದೇವರಾಜ ಪತ್ತಾರ ಇತರರಿದ್ದರು.

ನಮ್ಮ ದೈನಂದಿನ ಚಟುವಟಿಕೆಯಲ್ಲಿ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ನಮ್ಮವರಿಗೆ ಪರಿಸರ ಕಾಳಜಿ ಮೂಡಿಸಬೇಕು. ಎಲ್ಲೆಂದರಲ್ಲಿ ಕಸ ಬಿಸಾಡದೆ ಸರಿಯಾಗಿ ವಿಲೇವಾರಿ ಮಾಡಬೇಕು. ನಮ್ಮ ಸುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಂಡಲ್ಲಿ ನಾವೂ ಆರೋಗ್ಯದಿಂದ ಇರಲು ಸಾಧ್ಯ.
| ದುಂಡಪ್ಪ ತುರಾದಿ ತಾಪಂ ಇಒ