DC NALEEN ATHUL 
ಜಿಲ್ಲೆ

ಕೊಪ್ಪಳ ಪ್ರವಾಸೋದ್ಯಮ ಬ್ರ್ಯಾಂಡ್​ ಸೃಷಿಸಿ, ಡಿಸಿ ನಲಿನ್​ ಅತುಲ್​ ಸೂಚನೆ

ಕೊಪ್ಪಳ: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶಗಳಿವೆ. ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವಂತೆ ಪ್ರವಾಸಿ ತಾಣ ಅಭಿವೃದ್ಧಿಪಡಿಸುವಂತೆ ಜಿಲ್ಲಾಧಿಕಾರಿ ನಲಿನ್​ ಅತುಲ್​ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳ ಬಳಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಕೊಪ್ಪಳ ಬ್ರ್ಯಾಂಡ್​ ಯೋಜನೆಯಡಿ ಜಿಲ್ಲೆಗೆ ದೇಶ, ವಿದೇಶಿ ಪ್ರವಾಸಿಗರನ್ನು ಸೆಳೆವ ಕೆಲಸವಾಗಲಿ. ವೆಬ್​ಸೈಟ್​, ಸಾಮಾಜಿಕ ಜಾಲತಾಣ ಮೂಲಕ ಜಿಲ್ಲೆ ಪ್ರವಾಸಿ ತಾಣಗಳನ್ನು ಹೆಚ್ಚು ಪ್ರಚುರಪಡಿಸಿ. ಅಂಜನಾದ್ರಿ ಬೆಟ್ಟ, ಹುಲಿಗೆಮ್ಮ ದೇವಾಲಯ, ಕನಕಗಿರಿ ಕನಕಾಚಲಪತಿ ದೇವಾಲಯ, ಹಿರೇಬೆಣಕಲ್​ ಮೊರೆರ್​ ಬೆಟ್ಟ, ಇಟಗಿ ಮಹಾದೇವ ದೇವಾಲಯ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ. ಈಗಾಗಲೇ ಕೈಗೊಂಡ ಕಾಮಗಾರಿಗಳ ಪ್ರಗತಿ ವೇಗ ಪಡೆಯುವಂತೆ ನೋಡಿಕೊಳ್ಳುವಂತೆ ನಿರ್ದೇಶಿಸಿದರು.

ಐತಿಹಾಸಿ ಸ್ಮಾರಕ ಗುರುತಿಸಿ ರಸಿ. 100 ಕೋಟಿ ರೂ. ಮೊತ್ತದಲ್ಲಿ ಅಂಜನಾದ್ರಿಯಲ್ಲಿ ಪ್ರವಾಸಿ ಮಂದಿರ, ಶಾಪಿಂಗ್​ ಕಾಂಪ್ಲೆಕ್ಸ್​, ಶೌಚಗೃಹ, ಪ್ರದಣ ಪಥ ಹಾಗೂ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಕಾಮಗಾರಿಗಳ ಪ್ರಗತಿಗೆ ವೇಗ ನೀಡಿ. ಹೆಚ್ಚುವರಿ 100 ಕೋಟಿ ರೂ. ಅನುದಾನ ನೀಡಿದ್ದು, ಕ್ರಿಯಾ ಯೋಜನೆ ತಯಾರಿಸಿ ಸಲ್ಲಿಸಿ. ಹುಲಿಗೆಮ್ಮ ದೇವಾಲಯ, ಕನಕಾಚಲಪತಿ ದೇವಾಲಯ ಸಮಗ್ರ ಅಭಿವೃದ್ಧಿಗೆ ಮತ್ತು ಒಂದು ಜಿಲ್ಲೆ- ಒಂದು ತಾಣ ಯೋಜನೆಯಡಿ ಇಟಗಿ ಮಹಾದೇವ ದೇವಾಲಯದ ಸಮಗ್ರ ಅಭಿವೃದ್ಧಿ ಮಾಡಿ. ಹಿರೇಬೆಣಕಲ್​ ಗ್ರಾಮದ ಮೋರೆರ ಬೆಟ್ಟದ ಸುತ್ತಲಿನ ಪ್ರದೇಶ ಭಾರತೀಯ ಸರ್ವೇಕ್ಷಣ ಇಲಾಖೆ ಹಂಪಿ ವೃತ್ತ, ಅರಣ್ಯ ಇಲಾಖೆಗೆ ಒಳಪಟ್ಟಿದೆ. ಅಲ್ಲಿಗೆ ತೆರಳಲು ಮಾರ್ಗ, ಮಾಹಿತಿ ಲಕ, ಕುಡಿವ ನೀರು, ಶೌಚಗೃಹ ಇನ್ನಿತರ ಸೌಲಭ್ಯ ಕಲ್ಪಿಸಲು ಕ್ರಿಯಾ ಯೋಜನೆ ರಚಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ತಾಕೀತು ಮಾಡಿದರು.

ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಎಡಿಸಿ ಸಿದ್ರಾಮೇಶ್ವರ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಪ್ರವಾಸೋದ್ಯಮ ಇಲಾಖೆ ಎಡಿ ಡಿ.ಮಂಜುನಾಥ ಇತರ ಅಧಿಕಾರಿಗಳಿದ್ದರು.